Security lapse during PM Modis visit: 6 police personnel including PSI suspended
x

ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟ್‌ ಆಫ್‌ ಲಿವಿಂಗ್‌ಗೆ ತೆರಳುವ ಮಾರ್ಗದಲ್ಲಿ ಪತ್ತೆಯಾಗಿದ್ದ ಸ್ಫೋಟಕ

ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ: ಪಿಎಸ್‌ಐ ಸೇರಿ 6 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

ಅಮಾನತುಗೊಂಡ ಸಿಬ್ಬಂದಿಯನ್ನು ಪ್ರಧಾನಿ ಭೇಟಿಯ ದಿನದಂದು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸ್ಫೋಟಕ ಪತ್ತೆಯಾದ ಸ್ಥಳದ ಬಳಿಯೇ ಇವರು ಭದ್ರತೆಯ ಉಸ್ತುವಾರಿ ನೋಡಿಕೊಳ್ಳಬೇಕಿತ್ತು.


Click the Play button to hear this message in audio format

ಪ್ರಧಾನಿ ನರೇಂದ್ರ ಮೋದಿ ಮೇ 10ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಪತ್ತೆಯಾದ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪೊಲೀಸರ ತಡೆದಂಡವಾಗಿದೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪಿಎಸ್ಐ, ಎಎಸ್ಐ ಹಾಗೂ ನಾಲ್ವರು ಕಾನ್‌ಸ್ಟೇಬಲ್‌ಗಳನ್ನುಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಎಸ್‌ಪಿ ಶ್ರೀನಿವಾಸ್ ಗೌಡ ಅವರು ಆದೇಶ ಹೊರಡಿಸಿದ್ದಾರೆ.

ಅಮಾನತಾದ ಸಿಬ್ಬಂದಿಯನ್ನು ಪ್ರಧಾನಿ ಭೇಟಿಯ ಮಾರ್ಗದಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಸ್ಫೋಟಕ ಪತ್ತೆಯಾದ ಸ್ಥಳದ ಬಳಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಬೇಕಿತ್ತಾದರೂ ಕರ್ತವ್ಯದ ವೇಳೆ ಅಲರ್ಟ್ ಆಗಿರದ ಕಾರಣ ಪೊಲೀಸರ ವಿರುದ್ಧ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಿ ಬರುವ ಕೇವಲ 2 ಗಂಟೆ ಮುನ್ನ ಸಿಕ್ಕಿತ್ತು ಬಾಕ್ಸ್!

ಮೇ 10ರಂದು ಪ್ರಧಾನಿ ನರೇಂದ್ರ ಮೋದಿ ಕನಕಪುರ ರಸ್ತೆಯ ‘ಆರ್ಟ್ ಆಫ್ ಲಿವಿಂಗ್’ ಆಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಎರಡು ಗಂಟೆಗಳ ಮೊದಲೇ ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ರಸ್ತೆ ಪಕ್ಕದಲ್ಲಿ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿತ್ತು.

ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್‌ವೊಬ್ಬರು ಬಾಕ್ಸ್ ಗಮನಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಪರಿಶೀಲಿಸಿದಾಗ ಅದರಲ್ಲಿ ಸ್ಫೋಟಕ ಪತ್ತೆಯಾಗಿತ್ತು.

ಹೈಅಲರ್ಟ್: ಮರು ತಪಾಸಣೆ

ವಿವಿಐಪಿ ಭದ್ರತಾ ಮಾರ್ಗದಲ್ಲೇ ಸ್ಫೋಟಕ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಸೈಬರ್ ಹಾಗೂ ಸ್ಥಳೀಯ ಪೊಲೀಸರು ತಕ್ಷಣವೇ ಸ್ಫೋಟಕಗಳನ್ನು ವಶಕ್ಕೆ ಪಡೆದರು. ಬಳಿಕ ಇಡೀ ಮಾರ್ಗವನ್ನು ಮತ್ತೊಮ್ಮೆ ಅತ್ಯಾಧುನಿಕ ಉಪಕರಣಗಳ ಮೂಲಕ ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಹಿರಿಯ ಅಧಿಕಾರಿಗಳಿಂದ ಹಸಿರು ನಿಶಾನೆ ಸಿಕ್ಕ ಬಳಿಕವಷ್ಟೇ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಗಂಭೀರ ಲೋಪದ ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ತಿಳಿಸಿವೆ.

Read More
Next Story