
ನೀರಾನೆ ದಾಳಿಗೆ ಪಶುವೈದ್ಯೆ ಸಾವು| ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ವೈದ್ಯಕೀಯ ವಿಭಾಗಕ್ಕೆ ಹೆಚ್ಚಿದ ಒತ್ತಡ
ರಾಜ್ಯದಲ್ಲಿ ಮಂಜೂರಾದ ಒಟ್ಟು 3,300 ಪಶುವೈದ್ಯರ ಹುದ್ದೆಗಳಲ್ಲಿ ಬರೋಬ್ಬರಿ 1,200 ಹುದ್ದೆಗಳು ಖಾಲಿ ಇವೆ. ಅಂದರೆ ಶೇ. 36ರಷ್ಟು ಆಸ್ಪತ್ರೆಗಳಲ್ಲಿ ಪಶುವೈದ್ಯರೇ ಇಲ್ಲ.
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಪ್ರಕರಣದಿಂದ ಅರಣ್ಯ ಆಡಳಿತದಲ್ಲಿನ ಲೋಪಗಳು ಹಾಗೂ ಪಶುವೈದ್ಯರ ಕೊರತೆ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. ಪಶುಸಂಗೋಪನೆ ಇಲಾಖೆಯಲ್ಲಿ ಪಶುವೈದ್ಯರ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಇದೇ ಸಿಬ್ಬಂದಿ ಮೇಲೆ ಅರಣ್ಯ ಇಲಾಖೆಗೆ ಸೇರಿದ ಮೃಗಾಲಯಗಳ ಕಾರ್ಯಭಾರದ ಹೊರೆ ಇದೆ. ಹೀಗಾಗಿ ಪಶುವೈದ್ಯರು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಡಾ.ಸಮೀಕ್ಷಾ ರೆಡ್ಡಿ ಸಾವಿನ ಬಳಿಕ ಅರಣ್ಯ ಇಲಾಖೆಯಲ್ಲೇ ಪ್ರತ್ಯೇಕ ವೈದ್ಯಕೀಯ ವಿಭಾಗ ಆರಂಭಿಸಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.
ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡಬೇಕಾದ ಪಶುವೈದ್ಯಕೀಯ ಆಸ್ಪತ್ರೆಗಳು ವೈದ್ಯರಿಲ್ಲದೆ ಸೊರಗುತ್ತಿವೆ. ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಿಗೂ ಮತ್ತು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಇದೇ ವಿಚಾರ ಎರಡೂ ಇಲಾಖೆಗಳಲ್ಲಿನ ಆಡಳಿತ ಲೋಪಗಳನ್ನು ಎತ್ತಿ ತೋರಿಸಿದೆ.
ಉಭಯ ಇಲಾಖೆಗಳ ನಡುವೆ ಸಮರ
ಪಶುವೈದ್ಯರ ಬಳಕೆ ವಿಚಾರದಲ್ಲಿ ಪ್ರಸ್ತುತ, ಅರಣ್ಯ ಇಲಾಖೆಯ ನಡೆ ಚರ್ಚೆಯ ಕೇಂದ್ರಬಿಂದುವಾಗಿದೆ. ವನ್ಯಜೀವಿಗಳ ರಕ್ಷಣೆ, ಸೆರೆ ಅಥವಾ ಅವುಗಳಿಗೆ ಚಿಕಿತ್ಸೆ ನೀಡುವ ಕೆಲಸ ಅತ್ಯಂತ ಅಪಾಯಕಾರಿ. ಇಷ್ಟೊಂದು ಸೂಕ್ಷ್ಮ ಜವಾಬ್ದಾರಿ ಇದ್ದರೂ ಅರಣ್ಯ ಇಲಾಖೆ ತನ್ನದೇ ಆದ ಕಾಯಂ ಪಶುವೈದ್ಯರನ್ನು ಹೊಂದಿಲ್ಲ. ಬದಲಿಗೆ ಪಶುಸಂಗೋಪನಾ ಇಲಾಖೆಯಿಂದ ವೈದ್ಯರನ್ನು ನಿಯೋಜನೆ ಮೇಲೆ ಪಡೆದುಕೊಳ್ಳುತ್ತಿದೆ. ಈ ನಿಯೋಜಿತ ವೈದ್ಯರಿಗೆ ವನ್ಯಜೀವಿಗಳ ನಡವಳಿಕೆಯ ಬಗ್ಗೆ ವಿಶೇಷ ತರಬೇತಿ ಅಥವಾ ಪ್ರಾಣಾಪಾಯದ ಸಂದರ್ಭದಲ್ಲಿ ಸೂಕ್ತ ವಿಮಾ ರಕ್ಷಣೆ ಇರುವುದಿಲ್ಲ. ಪಶು ವೈದ್ಯಕೀಯ ಇಲಾಖೆಯ ವೈದ್ಯರನ್ನು ಅರಣ್ಯ ಇಲಾಖೆಯು ಪ್ರಾಣಿಗಳಿಗೆ ಬಲಿ ಕೊಡುತ್ತಿದೆ ಎಂದು ಪಶುವೈದ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯೇ ಪ್ರತ್ಯೇಕವಾಗಿ ಪಶು ವೈದ್ಯಕೀಯ ವಿಭಾಗ ಆರಂಭಿಸಬೇಕೆಂಬ ಬೇಡಿಕೆಯು ಮುನ್ನೆಲೆಗೆ ಬಂದಿದೆ.
ರಾಶಿ ರಾಶಿ ಖಾಲಿ ಹುದ್ದೆಗಳು
ರಾಜ್ಯದಲ್ಲಿ ಪಶುವೈದ್ಯಕೀಯ ಸೇವೆಯು ಐಸಿಯುನಲ್ಲಿದೆ ಎಂಬ ಮಾತುಗಳಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳೇ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮಂಜೂರಾದ ಒಟ್ಟು 3,300 ಪಶುವೈದ್ಯರ ಹುದ್ದೆಗಳಲ್ಲಿ ಬರೋಬ್ಬರಿ 1,200 ಹುದ್ದೆಗಳು ಖಾಲಿ ಉಳಿದಿವೆ. ಶೇ. 36ರಷ್ಟು ಪಶು ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ಇಡೀ ಇಲಾಖೆಯಲ್ಲಿ ಡಿ-ದರ್ಜೆ ನೌಕರರು, ಪಶು ಪರೀಕ್ಷಕರು ಸೇರಿದಂತೆ ಒಟ್ಟು 16 ಸಾವಿರ ಹುದ್ದೆಗಳಿವೆ. ಆದರೆ, 9,500 ಹುದ್ದೆಗಳು ಖಾಲಿ ಇವೆ. ಶೇ. 60ರಷ್ಟು ಸಿಬ್ಬಂದಿ ಇಲ್ಲದೆ ಪಶು ಸಂಗೋಪನಾ ಇಲಾಖೆ ಒದ್ದಾಡುತ್ತಿದೆ.
ಒಬ್ಬರೇ ವೈದ್ಯರು ಚಿಕಿತ್ಸೆ ನೀಡುವುದಲ್ಲದೆ ಆಸ್ಪತ್ರೆಯ ದಾಖಲೆ ನಿರ್ವಹಣೆ, ಔಷಧಗಳ ಉಸ್ತುವಾರಿ ಮತ್ತು ಡಿ ದರ್ಜೆ ನೌಕರರು ಮಾಡಬೇಕಾದ ಸ್ವಚ್ಛತೆಯ ಕೆಲಸವನ್ನೂ ಮಾಡಬೇಕಾದ ಅನಿವಾರ್ಯತೆ ಇದೆ. ಇದು ವೈದ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಿಸಿ, ಸೇವೆಯ ಗುಣಮಟ್ಟ ಕ್ಷೀಣಿಸುವಂತೆ ಮಾಡಿದೆ.
ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿದ ಚಾಮರಾಜನಗರ ಜಿಲ್ಲೆಯ ರೈತ ಮಹಿಪಾಲ, ರಾಜ್ಯದ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಕೇವಲ ಉಪಕಸುಬು ಮಾತ್ರವಲ್ಲ. ರೈತರ ಆದಾಯದ ಮೂಲವಾಗಿದೆ. ಜಾನುವಾರುಗಳು ಅನಾರೋಗ್ಯಕ್ಕೆ ಒಳಗಾದಾಗ ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದರೆ ಇಡೀ ಕುಟುಂಬದ ಆರ್ಥಿಕ ಸ್ಥಿತಿಯೇ ಬುಡಮೇಲಾಗುತ್ತದೆ. ಅನೇಕ ತಾಲ್ಲೂಕುಗಳಲ್ಲಿ ಒಬ್ಬ ವೈದ್ಯರು ಮೂರ್ನಾಲ್ಕು ಆಸ್ಪತ್ರೆಗಳ 'ಪ್ರಭಾರ' ವಹಿಸಿಕೊಂಡಿದ್ದಾರೆ. ಸೋಮವಾರ ಒಂದು ಊರಿನಲ್ಲಿದ್ದರೆ, ಮಂಗಳವಾರ ಮತ್ತೊಂದು ಊರಿನಲ್ಲಿರುತ್ತಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ವೈದ್ಯರು ಲಭ್ಯವಿರುವುದಿಲ್ಲ. ಸರ್ಕಾರಿ ವೈದ್ಯರ ಕೊರತೆಯ ಲಾಭ ಪಡೆಯುವ ಕೆಲವು ಖಾಸಗಿ ವ್ಯಕ್ತಿಗಳು ಅಥವಾ ಅರೆಕಲಿತ ಚಿಕಿತ್ಸಕರು ರೈತರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲವೊಮ್ಮೆ ತಪ್ಪುಚಿಕಿತ್ಸೆಯಿಂದ ಪ್ರಾಣಿಗಳು ಸಾವನ್ನಪ್ಪುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುತೇಕ ಜಿಲ್ಲೆಯಲ್ಲಿ ವೈದ್ಯರ ಕೊರತೆ
ಉತ್ತರ ಕರ್ನಾಟಕ, ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಶುವೈದ್ಯರ ಕೊರತೆ ಅತ್ಯಂತ ಗಂಭೀರವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಜಾನುವಾರು ಹೊಂದಿರುವ ಜಿಲ್ಲೆಗಳಲ್ಲಿ ಬೆಳಗಾವಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಸುಮಾರು 150ಕ್ಕೂ ಹೆಚ್ಚು ಪಶುವೈದ್ಯರ ಹುದ್ದೆಗಳು ಮಂಜೂರಾಗಿದ್ದು, ಆದರೆ, 50-60 ಹುದ್ದೆಗಳು ಖಾಲಿ ಉಳಿದಿವೆ.
ಹೈನುಗಾರಿಕೆಯ ಜಾಲ ಎನಿಸಿಕೊಂಡಿರುವ ತುಮಕೂರು, ಹಾಸನದಲ್ಲಿ ತಲಾ 40ಕ್ಕೂ ಹೆಚ್ಚು ವೈದ್ಯರ ಕೊರತೆ ಇದೆ. ಇದರಿಂದ ಹೈಬ್ರಿಡ್ ಹಸುಗಳ ತುರ್ತು ಚಿಕಿತ್ಸೆಗೆ ರೈತರು ಖಾಸಗಿ ವೈದ್ಯರನ್ನೇ ಅವಲಂಬಿಸಬೇಕಾಗಿದೆ. ಕಲಬುರಗಿ, ವಿಜಯಪುರ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬೇಗ ಹರಡುತ್ತವೆ. ಇಲ್ಲಿ ಶೇ.40ರಷ್ಟು ವೈದ್ಯರ ಹುದ್ದೆಗಳು ಭರ್ತಿಯಾಗಿಲ್ಲ. ಮೈಸೂರು, ಮಂಡ್ಯದಲ್ಲಿಯೂ ಸುಮಾರು 30 ರಿಂದ 35 ಪಶುವೈದ್ಯರ ಹುದ್ದೆಗಳು ಖಾಲಿ ಇವೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಪಶು ವೈದ್ಯರಿಲ್ಲದೆ ಕೇವಲ ಪಶು ಪರೀಕ್ಷಕರು ಅಥವಾ ಡಿ ದರ್ಜೆ ನೌಕರರೇ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ ಎಂದು ಮೂಲಗಳು ಹೇಳಿವೆ.
ಪಶುವೈದ್ಯರ ಕೊರತೆಯಿಂದ ಆಗುವ ನಷ್ಟವೇನು?
ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಬೇಕಾದಾಗ ವೈದ್ಯರು ಸಿಗದೆ ಪ್ರಾಣಹಾನಿಯಾಗುತ್ತಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಾಲುಬಾಯಿ ರೋಗ, ಚರ್ಮಗಂಟು ರೋಗದಂತಹ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆಯೂ ವೈದ್ಯರ ಕೊರತೆಯಿಂದಾಗಿ ವಿಳಂಬವಾಗುತ್ತಿದೆ. ಸರ್ಕಾರ ಆರಂಭಿಸಿರುವ 'ಪಶು ಸಂಜೀವಿನಿ' ಸಂಚಾರಿ ಚಿಕಿತ್ಸಾ ವಾಹನಗಳಲ್ಲೂ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೇ ಇಡೀ ಯೋಜನೆ ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪುತ್ತಿಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದಿದ್ದರೆ ಹಸುಗಳ ಕೃತಕ ಗರ್ಭಧಾರಣೆ ಪ್ರಕ್ರಿಯೆ ವಿಫಲವಾಗಿ, ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪಶುವೈದ್ಯರ ನೇಮಕಾತಿ ಪ್ರಕ್ರಿಯೆಯು ಕಾನೂನು ಹೋರಾಟ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದ ಕುಂಟುತ್ತಾ ಸಾಗಿದೆ. ಸರ್ಕಾರಗಳು ಕೃಷಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಪಶುಸಂಗೋಪನೆಗೆ ನೀಡುತ್ತಿಲ್ಲ. ಬಜೆಟ್‌ನಲ್ಲಿ ಇಲಾಖೆಗೆ ಸಿಗುವ ಪಾಲು ತೀರಾ ಕಡಿಮೆ. ಪಶುವೈದ್ಯಕೀಯ ಪದವಿ ಪಡೆದ ಯುವಕರು ಸರ್ಕಾರಿ ಕೆಲಸದ ಒತ್ತಡ ಮತ್ತು ಸೌಲಭ್ಯಗಳ ಕೊರತೆಯಿಂದ ಖಾಸಗಿ ಕಂಪನಿಗಳು ಅಥವಾ ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂಬ ಆರೋಪಗಳು ಇಲಾಖೆಯಲ್ಲೇ ಕೇಳಿ ಬರುತ್ತಿವೆ.
ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಪಶು ವೈದ್ಯರ ಸಂಘದ ಅಧ್ಯಕ್ಷ ಡಾ. ಶಿವಶರಣಪ್ಪ ಯಲಗೋಡು, ಅರಣ್ಯ ಇಲಾಖೆಯು ತಕ್ಷಣವೇ ತನ್ನದೇ ಆದ ಪಶುವೈದ್ಯರ ವಿಭಾಗ ಆರಂಭಿಸಬೇಕು. ವನ್ಯಜೀವಿ ತಜ್ಞ ವೈದ್ಯರನ್ನು ನೇರವಾಗಿ ನೇಮಕ ಮಾಡಿಕೊಳ್ಳಬೇಕು. ಪಶುವೈದ್ಯಕೀಯ ಇಲಾಖೆ ವೈದ್ಯರನ್ನು ನಿಯೋಜನೆ ಮೇರೆಗೆ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಇನ್ನು, ಪಶುವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ 1,200 ವೈದ್ಯರ ಹುದ್ದೆ ಮತ್ತು 9,500 ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವ ಪಶುವೈದ್ಯರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯ ಎಂದು ಹೇಳಿದರು.

