ರಾಜ್ಯದಲ್ಲಿ ಭೀಕರ ಬರಗಾಲದ ಮುನ್ಸೂಚನೆ: ನೀರು ಮತ್ತು ಮೇವಿಗಾಗಿ ಹಾಹಾಕಾರ?
x

ರಾಜ್ಯದಲ್ಲಿ ಭೀಕರ ಬರಗಾಲದ ಮುನ್ಸೂಚನೆ: ನೀರು ಮತ್ತು ಮೇವಿಗಾಗಿ ಹಾಹಾಕಾರ?

ಮಾರುಕಟ್ಟೆಯಲ್ಲಿ ಒಂದು ಲೋಡ್ ಮೇವಿನ ಬೆಲೆ ಆಕಾಶಕ್ಕೇರುವ ಸಾಧ್ಯತೆ ಇದೆ. ಈ ಹಿಂದೆ 6 ರಿಂದ 8 ಸಾವಿರಕ್ಕೆ ಸಿಗುತ್ತಿದ್ದ ಒಂದು ಲೋಡ್ ಹುಲ್ಲು 15 ರಿಂದ 20 ಸಾವಿರ ರೂ.ಗಳಿಗೆ ಮಾರಾಟವಾಗಲಿದೆ.


Click the Play button to hear this message in audio format

ರಾಜ್ಯವು ಈ ಬಾರಿ ಅತ್ಯಂತ ಕಠಿಣ ಬೇಸಿಗೆಯನ್ನು ಎದುರಿಸುವ ಸಾಧ್ಯತೆಯಿದೆ. ಮಾರ್ಚ್ ತಿಂಗಳ ಆರಂಭದಲ್ಲೇ ಕೆಲವು ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಕಳೆದ ವರ್ಷ ವಾಡಿಕೆಯಂತೆ ಮಳೆಯಾಗದ ಕಾರಣ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗಿಲ್ಲ. ಇದು ಕೃಷಿಯ ಮೇಲೆ ಮಾತ್ರವಲ್ಲದೆ, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಮೇಲೆಯೂ ಗಂಭೀರ ಪರಿಣಾಮ ಬೀರಿದೆ. ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸುತ್ತಿದ್ದು, ನೀರಿನ ಮತ್ತು ಮೇವಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರವು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ಕುಸಿಯುತ್ತಿರುವ ಅಂತರ್ಜಲ ಮಟ್ಟ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವು ಪಾತಾಳಕ್ಕೆ ಕುಸಿದಿದೆ. ಹಿಂದೆ 300-400 ಅಡಿಗಳಲ್ಲಿ ಸಿಗುತ್ತಿದ್ದ ನೀರು, ಈಗ 1000 ಅಡಿ ಕೊರೆದರೂ ಲಭ್ಯವಾಗುತ್ತಿಲ್ಲ. ಹಳೆಯ ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಗ್ರಾಮೀಣ ಭಾಗದ ಬಹುತೇಕ ಕೆರೆಗಳು ಹೂಳು ತುಂಬಿದ್ದು, ನೀರಿಲ್ಲದೆ ಬಿರುಕು ಬಿಟ್ಟಿವೆ. ಇದರಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಜಾನುವಾರುಗಳ ಮೇವಿನ ಅಭಾವ

ರೈತರ ಪಾಲಿಗೆ ಜಾನುವಾರುಗಳು ಕೇವಲ ಪ್ರಾಣಿಗಳಲ್ಲ, ಅವು ಸಂಸಾರದ ಅವಿಭಾಜ್ಯ ಅಂಗ. ಆದರೆ ಇಂದು ಅವುಗಳನ್ನು ಉಳಿಸಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಮಾರುಕಟ್ಟೆಯಲ್ಲಿ ಮೇವಿನ ಬೆಲೆ ಆಕಾಶಕ್ಕೇರುತ್ತಿದೆ. ಈ ಹಿಂದೆ 6 ರಿಂದ 8 ಸಾವಿರ ರೂಪಾಯಿಗೆ ಸಿಗುತ್ತಿದ್ದ ಒಂದು ಲೋಡ್ ಹುಲ್ಲಿನ ಬೆಲೆ ಇಂದು 15 ರಿಂದ 20 ಸಾವಿರ ರೂಪಾಯಿಗಳಿಗೆ ತಲುಪಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಇಷ್ಟು ಹಣ ನೀಡಿ ಮೇವು ಕೊಳ್ಳುವುದು ಅಸಾಧ್ಯವಾಗಿದೆ.

ಸ್ಥಳೀಯವಾಗಿ ಬೆಳೆದ ಮೇವನ್ನು ಸಂಗ್ರಹಿಸುವ ಬದಲು, ಹೆಚ್ಚಿನ ಲಾಭದ ಆಸೆಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಂತಹ ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಕೃತಕ ಮೇವಿನ ಅಭಾವ ಸೃಷ್ಟಿಸುತ್ತಿದೆ. ಅಂತರ್ಜಲ ಕುಸಿತದಿಂದಾಗಿ ರೈತರಿಗೆ ಹಸಿ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಹಾಲಿನ ಇಳುವರಿ ಕಡಿಮೆಯಾಗಿ ರೈತರ ಆದಾಯಕ್ಕೆ ಕತ್ತರಿ ಬಿದ್ದಿದೆ.

ಉತ್ತರ ಕರ್ನಾಟಕದ ಪರಿಸ್ಥಿತಿ

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು ರಾಜ್ಯದಲ್ಲೇ ಗರಿಷ್ಠ ಮಟ್ಟದಲ್ಲಿದೆ. ಕೃಷ್ಣಾ ಮತ್ತು ಭೀಮಾ ನದಿಗಳು ಬತ್ತುತ್ತಿದ್ದು, ಕುಡಿಯುವ ನೀರಿನ ಟ್ಯಾಂಕರ್‌ಗಳಿಗಾಗಿ ಜನರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ತಕ್ಷಣವೇ 'ಮೇವು ಬ್ಯಾಂಕ್‌'ಗಳನ್ನು ತೆರೆಯುವಂತೆ ರೈತರು ಸತತವಾಗಿ ಒತ್ತಾಯಿಸುತ್ತಿದ್ದಾರೆ. ಜೋಳದ ಕಡ್ಡಿಗಳ ಲಭ್ಯತೆ ಇಲ್ಲದ ಕಾರಣ ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೇವಿನ ದರ ಪ್ರತಿದಿನವೂ ಏರಿಕೆಯಾಗುತ್ತಿದೆ. ಕೃಷಿಯೇ ಸಂಕಷ್ಟದಲ್ಲಿರುವಾಗ ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ, ಅನೇಕ ರೈತರು ಅನಿವಾರ್ಯವಾಗಿ ತಮ್ಮ ದನಗಳನ್ನು ಕಸಾಯಿಖಾನೆಗೆ ಅಥವಾ ದನಗಳ ಸಂತೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ರೈತ ಎಚ್. ಮರಿಯಪ್ಪ, "ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಿರುವ ದಾಸ್ತಾನು ಖಾಲಿಯಾಗುತ್ತಿದೆ. ಸರ್ಕಾರವು ಏಪ್ರಿಲ್ ಮತ್ತು ಮೇ ತಿಂಗಳ ವೇಳೆಗೆ ಮೇವಿನ ಕೊರತೆಯಾಗದಂತೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸಿದರು.

ಟ್ಯಾಂಕರ್ ಮಾಫಿಯಾದ ಹಾವಳಿ

ನಗರ ಪ್ರದೇಶಗಳಲ್ಲಿ ಮತ್ತು ನೀರಿನ ತೀವ್ರ ಅಭಾವವಿರುವ ಹಳ್ಳಿಗಳಲ್ಲಿ 'ಟ್ಯಾಂಕರ್ ಮಾಫಿಯಾ' ತಲೆ ಎತ್ತಿದೆ. ಸರ್ಕಾರವು ಟ್ಯಾಂಕರ್ ದರವನ್ನು ನಿಗದಿಪಡಿಸಿದ್ದರೂ, ಖಾಸಗಿ ಮಾಲೀಕರು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 2 ರಿಂದ 3 ಸಾವಿರ ರೂಪಾಯಿ ಕೇಳುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟಲು ಸರ್ಕಾರವು ಎಲ್ಲ ಖಾಸಗಿ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು, ಜಿಲ್ಲಾಡಳಿತದ ಮೂಲಕ ನೀರು ಪೂರೈಸಲು ಮತ್ತು ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲು ಸೂಚಿಸಿದೆ. ಆದರೂ ಟ್ಯಾಂಕರ್ ಮಾಫಿಯಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.

ಬೆಂಗಳೂರಿನ ಬೇಗೂರು ನಿವಾಸಿ ಕೆ. ಕೃಷ್ಣಕುಮಾರ್ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, "ಬೆಂಗಳೂರಿನ ಹೊರವಲಯದ ಹಲವು ಭಾಗಗಳಿಗೆ ಇನ್ನೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ನಮಗೆ ಟ್ಯಾಂಕರ್ ನೀರೇ ಆಧಾರ. ಈ ಹಿಂದೆ ಒಂದು ಟ್ಯಾಂಕರ್‌ಗೆ 800 - 1000 ರೂಪಾಯಿ ಇತ್ತು, ಆದರೆ ಈಗ 2 - 3 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಸರ್ಕಾರ ದರ ನಿಗದಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು

ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ:

* ಪ್ರತಿ ತಾಲ್ಲೂಕಿನಲ್ಲಿ ಮೇವು ಬ್ಯಾಂಕ್‌ಗಳನ್ನು ಪ್ರಾರಂಭಿಸಿ, ರಿಯಾಯಿತಿ ದರದಲ್ಲಿ ರೈತರಿಗೆ ಮೇವು ಒದಗಿಸುವುದು.

* ನೀರಿನ ಅಭಾವವಿರುವ ಗ್ರಾಮಗಳಿಗೆ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಲು ಹಣ ಬಿಡುಗಡೆ ಮಾಡುವುದು.

* ಜಿಲ್ಲೆಯ ಮೇವು ಹೊರ ರಾಜ್ಯಗಳಿಗೆ ಹೋಗದಂತೆ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸುವುದು.

* ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಮೇವಿನ ತಳಿಗಳ ಕಿಟ್‌ಗಳನ್ನು ರೈತರಿಗೆ ವಿತರಿಸುವುದು.

Read More
Next Story