Police Dog Squad:  ಪೊಲೀಸರ ಜತೆ ನಾಯಿಗಳಿಗೂ ಡ್ಯೂಟಿ ಟೆನ್ಷನ್:  ಒತ್ತಡಕ್ಕೆ ಬಲಿಯಾಗುತ್ತಿವೆ ಶ್ವಾನಗಳು!
x

Police Dog Squad: ಪೊಲೀಸರ ಜತೆ ನಾಯಿಗಳಿಗೂ 'ಡ್ಯೂಟಿ' ಟೆನ್ಷನ್: ಒತ್ತಡಕ್ಕೆ ಬಲಿಯಾಗುತ್ತಿವೆ ಶ್ವಾನಗಳು!

ವಿಶ್ರಾಂತಿ ಇಲ್ಲದ ನಿರಂತರ ಕಾರ್ಯಾಚರಣೆ ಹಾಗೂ ಮಾನಸಿಕ ಒತ್ತಡದಿಂದಾಗಿ ಅಪರಾಧ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಶ್ವಾನಗಳು ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದು, ಇಲಾಖೆ ಶೀಘ್ರವೇ ಎಚ್ಚೆತ್ತುಕೊಳ್ಳಬೇಕಿದೆ.


ರಾಜ್ಯದಲ್ಲಿ ಸಿಬ್ಬಂದಿ ಕೊರತೆಯಿಂದ ಕೇವಲ ಪೊಲೀಸರು ಮಾತ್ರವಲ್ಲ, ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ವಾನ ದಳವೂ ತೀವ್ರ ಒತ್ತಡಕ್ಕೆ ಸಿಲುಕಿದೆ.

ಮಂಜೂರಾದ ಹುದ್ದೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಶ್ವಾನಗಳನ್ನು ಇಲಾಖೆಗೆ ನೇಮಕ ಮಾಡಿಕೊಂಡಿರುವುದರಿಂದ, ತರಬೇತಿ ನಿರತ ಹಾಗೂ ಕರ್ತವ್ಯದಲ್ಲಿರುವ ಪೊಲೀಸ್ ಶ್ವಾನಗಳ ತೀವ್ರ ಕೊರತೆ ಎದುರಾಗಿದೆ. ಮಾದಕ ವಸ್ತು, ಬಾಂಬ್ ಪತ್ತೆ ಸೇರಿದಂತೆ ನಾನಾ ಅಪರಾಧಗಳ ಚಟುವಟಿಕೆಗಳ ಪತ್ತೆಗಾಗಿ ಪೊಲೀಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿರುವ ಶ್ವಾನಗಳು ನಿಗದಿಗಿಂತ ಹೆಚ್ಚು ಅವಧಿಯಲ್ಲಿ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿವೆ. ರಾಜ್ಯ ಸರಕಾರ ಹಾಗೂ ಗೃಹ ಇಲಾಖೆಯು ಪೊಲೀಸ್ ಸಿಬ್ಬಂದಿ ನೇಮಕಾತಿಯಲ್ಲಿ ತೋರುತ್ತಿರುವ ವಿಳಂಬವನ್ನು ಶ್ವಾನ ದಳದ ನೇಮಕದಲ್ಲಿಯೂ ಮುಂದುವರಿಸಿದ್ದು, ಅಪರಾಧ ತನಿಖೆಯ ವೇಗದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜತೆಗೆ ಒತ್ತಡಗಳಿಗೆ ಸಿಲುಕಿರುವ ಶ್ವಾನಗಳ ಅಸಹಜ ಸಾವುಗಳ ಸಂಖ್ಯೆಯು ಏರಿಕೆಯಾಗುತ್ತಿದೆ.

ಎಷ್ಟಿವೆ ಶ್ವಾನಗಳು

ರಾಜ್ಯದಲ್ಲಿರುವ ಪೊಲೀಸ್ ಶ್ವಾನ ದಳದಲ್ಲಿ ಒಟ್ಟು 316 ಶ್ವಾನಗಳು ಕರ್ತವ್ಯ ನಿರ್ವಹಿಸಬೇಕಿದೆ. ಆದರೆ, ಸದ್ಯ ಕೇವಲ 266 ಶ್ವಾನಗಳಷ್ಟೇ ಸೇವೆಯಲ್ಲಿದ್ದು, ಇನ್ನೂ 50 ಶ್ವಾನಗಳ ಕೊರತೆ ಎದ್ದು ಕಾಣುತ್ತಿದೆ. ಸಾಮಾನ್ಯವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಹಾಗೂ ನಗರ ಸಶಸ್ತ್ರ ಮೀಸಲು ಪಡೆಗಳಲ್ಲಿ (ಸಿಎಆರ್) ಪ್ರತ್ಯೇಕ ಶ್ವಾನ ದಳದ ಘಟಕಗಳು ಕಾರ್ಯನಿರ್ವಹಿಸುತ್ತವೆ. ಇದರ ಜತೆಗೆ, ರೈಲ್ವೆ ಪೊಲೀಸ್, ಭ್ರಷ್ಟಾಚಾರ ನಿಗ್ರಹ ದಳ, ಮತ್ತು ವಿಶೇಷ ತನಿಖಾ ಸಂಸ್ಥೆಗಳಲ್ಲೂ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ.

ಆದರೆ, ಪ್ರಸ್ತುತ ಬಹುತೇಕ ಘಟಕಗಳು ಬರಿದಾಗಿವೆ. ಮಾದಕ ದ್ರವ್ಯ ವಿರೋಧಿ ಪಡೆಯಲ್ಲಿ 21 ಶ್ವಾನಗಳಿರಬೇಕಾದ ಕಡೆ ಕೇವಲ 8 ಶ್ವಾನಗಳಿವೆ. ಬೆಂಗಳೂರು ನಗರ ಉತ್ತರ ಸಿಎಆರ್‌ನಲ್ಲಿ 50ರ ಬದಲು ಕೇವಲ 16 ಶ್ವಾನಗಳಿದ್ದರೆ, ಬೆಂಗಳೂರು ದಕ್ಷಿಣ ಸಿಎಆರ್, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ಕೈಗಾರಿಕಾ ಭದ್ರತಾ ಪಡೆಯಲ್ಲೂ ಶ್ವಾನಗಳ ಸಂಖ್ಯೆ ಕ್ಷೀಣಿಸಿದೆ. ಸಕಾಲದಲ್ಲಿ ಖಾಲಿ ಇರುವ ಕಡೆ ಮರಿಗಳನ್ನು ಖರೀದಿಸದೆ ಇರುವುದರಿಂದ ಇರುವ ಬೆರಳೆಣಿಕೆಯ ಶ್ವಾನಗಳ ಮೇಲೆಯೇ ರಾಜ್ಯಾದ್ಯಂತ ನಿರಂತರ ಕಾರ್ಯಾಚರಣೆಯ ಭಾರ ಬೀಳುತ್ತಿದೆ.

ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಇತ್ತೀಚೆಗಷ್ಟೆ ವಿಧಾನಸೌಧದಲ್ಲಿ ಮಾತನಾಡಿ, ರಾಜ್ಯದಲ್ಲಿನ ಶ್ವಾನ ದಳಕ್ಕೆ 316 ಶ್ವಾನಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇದೆ. ಆದರೆ, ಸದ್ಯ 266 ಶ್ವಾನಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನುಳಿದ ಶ್ವಾನಗಳ ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಶ್ವಾನಗಳಿಗೆ ನಿತ್ಯ ನೀಡಲಾಗುತ್ತಿದ್ದ ಆಹಾರ ಭತ್ಯೆಯನ್ನು 100 ರಿಂದ 400 ರೂ.,ಗಳಿಗೆ ಏರಿಕೆ ಮಾಡಲಾಗಿದೆ ಎಂದರು.

ಸೇವೆಗೆ ಸೇರುವುದು ಹೇಗೆ?

ಈ ಮೂಕ ಸೇವಕರು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಪ್ರಕ್ರಿಯೆಯೇ ಅತ್ಯಂತ ವಿಶಿಷ್ಟವಾಗಿದೆ. ಇಲಾಖೆಯು ಅಧಿಕೃತ ಮತ್ತು ಪ್ರತಿಷ್ಠಿತ ಶ್ವಾನ ತಳಿಗಾರರಿಂದ (ಬ್ರೀಡರ್ಸ್) ಕೇವಲ ಮೂರು ತಿಂಗಳ ವಯಸ್ಸಿನ, ಉತ್ತಮ ಆರೋಗ್ಯವುಳ್ಳ ನಾಯಿಮರಿಗಳನ್ನು ಖರೀದಿಸುತ್ತದೆ. ಹೀಗೆ ಪೊಲೀಸ್ ಇಲಾಖೆಗೆ ಶ್ವಾನಗಳನ್ನು ಒದಗಿಸುವ ಮಾಲೀಕರಿಗೆ ಉತ್ತಮ ಆರ್ಥಿಕ ಲಾಭದ ಜತೆಗೆ, ತಾವು ಬೆಳೆಸಿದ ತಳಿಯೊಂದು ಸರಕಾರದ ಮಹತ್ವದ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂಬ ಹೆಮ್ಮೆ ಮತ್ತು ಪ್ರತಿಷ್ಠೆ ಸಿಗಲಿದೆ.

ಭವಿಷ್ಯದಲ್ಲಿ ಅವರ ಬ್ರೀಡಿಂಗ್ ಕೇಂದ್ರಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಸಹಜವಾಗಿ ಹೆಚ್ಚಾಗುತ್ತದೆ. ಮರಿಗಳನ್ನು ಖರೀದಿಸಿದ ತಕ್ಷಣ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅವುಗಳಿಗೆ 'ಹ್ಯಾಂಡ್ಲರ್' ಆಗಿ ನೇಮಿಸಲಾಗುತ್ತದೆ. ಬೆಂಗಳೂರಿನ ಆಡುಗೋಡಿ ಅಥವಾ ಇತರ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಸತತ ಆರು ತಿಂಗಳ ಕಾಲ ಸ್ಫೋಟಕ ಪತ್ತೆ, ಟ್ರ್ಯಾಕಿಂಗ್ ಸೇರಿದಂತೆ ಕಠಿಣ ತರಬೇತಿ ನೀಡಿದ ಬಳಿಕವಷ್ಟೇ ಅವುಗಳನ್ನು ಅಧಿಕೃತವಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸಲಾಗುತ್ತದೆ.

ತಳಿಗಳ್ಯಾವುವು?

ಪೊಲೀಸ್ ಪಡೆಯಲ್ಲಿ ವಿವಿಧ ವಿಶೇಷ ಕಾರ್ಯಗಳಿಗಾಗಿ ಪ್ರತ್ಯೇಕ ತಳಿಗಳನ್ನು ಬಳಸಲಾಗುತ್ತದೆ. ಮುಖ್ಯವಾಗಿ ಲ್ಯಾಬ್ರಡಾರ್‌, ಗೋಲ್ಡನ್‌ ರಿಟ್ರೀವರ್‌, ಜರ್ಮನ್‌ ಶೆಫರ್ಡ್‌, ಬೆಲ್ಜಿಯಂ ಮಾಲಿನೋಯಸ್‌, ಜಮರ್ನ್‌ ಶೆಫರ್ಡ್‌ ಹಾಗೂ ಡಾಬರ್‌ಮನ್‌ ತಳಿಯ ಶ್ವಾನಗಳನ್ನು ಚುರುಕುತನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸ್ಫೋಟಕ ವಸ್ತು, ಮಾದಕ ದ್ರವ್ಯ, ಅಪರಾಧ ನಡೆದ ಸ್ಥಳದಲ್ಲಿ ಸುಳಿವುಗಳ ಟ್ರ್ಯಾಕಿಂಗ್ ಹಾಗೂ ಶವಗಳ ಪತ್ತೆ ಕಾರ್ಯಗಳಿಗೆ ಈ ವಿಶೇಷ ತಳಿಗಳನ್ನು ಬಳಸಲಾಗುತ್ತದೆ. ಲ್ಯಾಬ್ರಡಾರ್ ಮತ್ತು ಗೋಲ್ಡನ್ ರಿಟ್ರೀವರ್‌ಗಳು ವಾಸನೆ ಗ್ರಹಿಸುವಲ್ಲಿ ನಿಸ್ಸೀಮವಾಗಿದ್ದರೆ, ಜರ್ಮನ್ ಶೆಫರ್ಡ್ ಮತ್ತು ಬೆಲ್ಜಿಯಂ ಮಾಲಿನೋಯಸ್ ಶ್ವಾನಗಳು ಅಪರಾಧಿಗಳನ್ನು ಬೆನ್ನಟ್ಟಿ ಹಿಡಿಯುವಲ್ಲಿ ಮತ್ತು ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿರುತ್ತವೆ. ಇತ್ತೀಚೆಗೆ ಸ್ಥಳೀಯ ಮುಧೋಳ ತಳಿಯನ್ನೂ ಸೇರಿಸಿಕೊಳ್ಳಲಾಗುತ್ತಿದೆ.

ಪ್ರತ್ಯೇಕ ಬಜೆಟ್‌

ಈ ವಿಶೇಷ ಶ್ವಾನಗಳ ಆರೋಗ್ಯ ಮತ್ತು ಊಟದ ನಿರ್ವಹಣೆಗೆ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ಬಜೆಟ್ ಹಾಗೂ ವಿಶೇಷ ನಿಗಾ ಇರುತ್ತದೆ. ಇವುಗಳಿಗೆ ಸಾಮಾನ್ಯ ನಾಯಿಗಳಂತೆ ಉಳಿಕೆ ಆಹಾರ ನೀಡುವಂತಿಲ್ಲ. ಪ್ರೋಟೀನ್, ವಿಟಮಿನ್ ಭರಿತ ಉನ್ನತ ಗುಣಮಟ್ಟದ ಮಾಂಸ, ಮೊಟ್ಟೆ, ಹಾಲು ಮತ್ತು ಪ್ರೀಮಿಯಂ ಡಾಗ್ ಫುಡ್‌ಗಳನ್ನು ಒಳಗೊಂಡ ನಿಖರವಾದ ಡಯಟ್ ಚಾರ್ಟ್ ಅನುಸರಿಸಲಾಗುತ್ತದೆ.

ಮೃತ ಪಡುವುದು ಹೆಚ್ಚು

ಪ್ರತಿ ಶ್ವಾನದ ತೂಕ ಮತ್ತು ಆರೋಗ್ಯದ ಮೇಲೆ ನಿರಂತರ ನಿಗಾ ಇಡಲು ನಿಯಮಿತವಾಗಿ ಪಶುವೈದ್ಯರಿಂದ ತಪಾಸಣೆ ಮಾಡಿಸಲಾಗುತ್ತದೆ. ಇಷ್ಟೆಲ್ಲಾ ಕಾಳಜಿ ವಹಿಸಿದರೂ, ಸ್ಫೋಟಕ ಮತ್ತು ಮಾದಕ ವಸ್ತುಗಳ ಪತ್ತೆಗಾಗಿ ನಿರಂತರವಾಗಿ ಬಳಸುವುದರಿಂದ ಹಾಗೂ ಮನುಷ್ಯರು ಕಾಲಿಡದಂತಹ ಅಪಾಯಕಾರಿ ಜಾಗಗಳಲ್ಲಿ ಕಾರ್ಯಾಚರಣೆ ನಡೆಸುವುದರಿಂದ, ಈ ಪೊಲೀಸ್ ನಾಯಿಗಳು ಸಹಜವಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಬೇಗನೇ ತುತ್ತಾಗುತ್ತವೆ. ಇಲಾಖೆಯ ಅಧಿಕಾರಿಗಳ ಪ್ರಕಾರ, ಶೇಕಡಾ 50ರಷ್ಟು ಶ್ವಾನಗಳು ಇಂತಹ ಆರೋಗ್ಯ ಸಮಸ್ಯೆಗಳಿಂದಾಗಿ ತಮ್ಮ ಸೇವಾವಧಿಯಲ್ಲೇ ಮರಣ ಹೊಂದುತ್ತಿರುವುದು ವಿಪರ್ಯಾಸ.

ಶ್ವಾಸಕೋಶದ ಸಮಸ್ಯೆ

ಸ್ಫೋಟಕ ಮತ್ತು ಮಾದಕ ವಸ್ತು ಪತ್ತೆಗಾಗಿ ಶ್ವಾನಗಳನ್ನು ನಿರಂತರವಾಗಿ ಬಳಸುವುದರಿಂದ ಮನುಷ್ಯರು ಕಾಲಿಡದ ಜಾಗ, ಪ್ರದೇಶಗಳಲ್ಲಿ ಪೊಲೀಸ್ ನಾಯಿಗಳು ಸಂಚಾರ ನಡೆಸಬೇಕಾಗಿರುವುದರಿಂದ ಸಹಜವಾಗಿ ಶ್ವಾಸಕೋಶ ಸಂಬಂಧ ಕಾಯಿಲೆಗಳಿಗೆ ಬೇಗನೇ ತುತ್ತಾಗುತ್ತವೆ. ಈ ಹಿನ್ನೆಲೆಯಲ್ಲಿ ಶೇ. 50ರಷ್ಟು ಶ್ವಾನಗಳು ಸೇವಾವಧಿಯಲ್ಲಿಯೇ ಮರಣ ಹೊಂದಿವೆ ಎನ್ನುತ್ತಾರೆ ಪೊಲೀಸ್ ಇಲಾಖೆಯ ಅಧಿಕಾರಿಗಳು.

ಈ ಬಗ್ಗೆ ಹೆಸರೇಳಲು ಇಚ್ಚಿಸದ ಶ್ವಾನಗಳ ಹ್ಯಾಂಡ್ಲರ್‌ ಒಬ್ಬರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಶ್ವಾನಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿರುತ್ತೆವೆ. ನಮ್ಮನೆಯ ಮಕ್ಕಳಿಗಿಂತಲೂ ಅವುಗಳನ್ನು ಕಂಡರೆ ಹೆಚ್ಚಿನ ಪ್ರೀತಿ. ಆದರೆ, ಇಲಾಖೆಯಲ್ಲಿ ಶ್ವಾನಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಮುಖ ಘಟನೆಗಳು ಎದುರಾದರೆ, ಒಂದು ದಿನಕ್ಕೆ ಎರಡರಿಂದ ಮೂರು ಅಪರಾಧ ಪ್ರಕರಣಗಲ್ಲಿ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ವೇಳೆ ಒತ್ತಡಗಳ ನಡುವೆಯೇ ಶ್ವಾನಗಳು ಕೆಲಸ ಮಾಡಬೇಕು. ಇದು ಶ್ವಾನಗಳ ಮೇಲೆ ಮಾನಸಿಕ ಪರಿಣಾಮವನ್ನುಂಟ ಮಾಡುತ್ತದೆ. ನಿವೃತ್ತಿ ಹೊಂದುವ ಶ್ವಾನಗಳಿಗಿಂತ ಕರ್ತವ್ಯದಲ್ಲಿದ್ದ ವೇಳೆಯೆ ಶ್ವಾನಗಳು ಮೃತ ಪಡುತ್ತಿವೆ ಎಂದು ಕಣ್ಣೀರಿಟ್ಟರು.

ತಳಿಗಳ ವಿಶೇಷಗಳೇನು?

ಜರ್ಮನ್ ಶೆಪರ್ಡ್: ಈ ತಳಿಯ ಶ್ವಾನಗಳು ಅತ್ಯಂತ ಬುದ್ಧಿವಂತ, ಧೈರ್ಯಶಾಲಿ ಮತ್ತು ಚುರುಕಾಗಿರುತ್ತವೆ. ಅಪರಾಧಿಗಳ ಜಾಡು ಹಿಡಿಯುವುದು, ಗಸ್ತು ತಿರುಗುವುದು ಮತ್ತು ರಕ್ಷಣಾ ಕಾರ್ಯಗಳಲ್ಲಿ ಇವುಗಳನ್ನು ಪ್ರಮುಖವಾಗಿ ಬಳಸಲಾಗುತ್ತದೆ.

ಲ್ಯಾಬ್ರಡಾರ್ ರಿಟ್ರೈವರ್: ಇವುಗಳ ಘ್ರಾಣ ಶಕ್ತಿ (ವಾಸನೆ ಗ್ರಹಿಸುವ ಸಾಮರ್ಥ್ಯ) ಅತ್ಯದ್ಭುತವಾಗಿರುತ್ತದೆ. ಹಾಗಾಗಿ, ಬಚ್ಚಿಟ್ಟ ಸ್ಫೋಟಕ ವಸ್ತುಗಳು ಮತ್ತು ಮಾದಕ ದ್ರವ್ಯಗಳನ್ನು ನಿಖರವಾಗಿ ಪತ್ತೆ ಹಚ್ಚುವ ಕಾರ್ಯದಲ್ಲಿ ಇವುಗಳ ಬಳಕೆ ಅತಿ ಹೆಚ್ಚು.

ಬೆಲ್ಜಿಯನ್ ಮಾಲಿನಾಯ್ಸ್: ಇವು ಅತಿ ಹೆಚ್ಚು ಚುರುಕು ಮತ್ತು ಶಕ್ತಿಶಾಲಿ ಶ್ವಾನಗಳಾಗಿವೆ. ಇವುಗಳ ದೈಹಿಕ ಸಾಮರ್ಥ್ಯದಿಂದಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಮತ್ತು ಕಠಿಣ ಸವಾಲುಗಳಿರುವ ಭದ್ರತಾ ಕಾರ್ಯಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಡಾಬರ್ಮನ್: ವೇಗ ಮತ್ತು ರಕ್ಷಣಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿರುವ ಇವುಗಳನ್ನು ಅಪರಾಧ ನಡೆದ ಸ್ಥಳದಲ್ಲಿ ಸುಳಿವುಗಳನ್ನು ಹುಡುಕಲು ಮತ್ತು ವಿಐಪಿ ಭದ್ರತೆಗಾಗಿ ಬಳಸಲಾಗುತ್ತದೆ.

ಮುಧೋಳ ಹೌಂಡ್: ಕರ್ನಾಟಕದ ಹೆಮ್ಮೆಯ ದೇಶಿ ತಳಿಯಾಗಿರುವ ಮುಧೋಳ ಹೌಂಡ್‌ಗಳನ್ನು ಕೂಡ ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ದಳಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇವುಗಳ ದೃಷ್ಟಿ, ಓಡುವ ವೇಗ, ಹವಾಮಾನಕ್ಕೆ ಹೊಂದಿಕೊಳ್ಳುವ ಗುಣ ಮತ್ತು ರೋಗನಿರೋಧಕ ಶಕ್ತಿ ಇತರ ವಿದೇಶಿ ತಳಿಗಳಿಗಿಂತ ಉತ್ತಮವಾಗಿರುತ್ತದೆ.

ಗೋಲ್ಡನ್ ರಿಟ್ರೈವರ್: ಇವುಗಳನ್ನು ಕೂಡ ಲ್ಯಾಬ್ರಡಾರ್‌ಗಳಂತೆಯೇ ಆಘ್ರಾಣಿಸುವ ಶಕ್ತಿ ಆಧಾರಿತ ಕಾರ್ಯಗಳಿಗೆ, ಮುಖ್ಯವಾಗಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಸ್ಫೋಟಕಗಳ ಪತ್ತೆಗೆ ಬಳಸಲಾಗುತ್ತದೆ.

ಸೇವಾವಧಿ ಎಷ್ಟು?

3 ತಿಂಗಳ ನಾಯಿ ಮರಿಯನ್ನು ಪೊಲೀಸ್ ಇಲಾಖೆಯು ಖರೀದಿಸಲಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಹ್ಯಾಂಡ್ಲರ್ ಆಗಿ ನೇಮಿಸುತ್ತದೆ. 6 ತಿಂಗಳ ತರಬೇತಿ ಬಳಿಕ ಪೊಲೀಸ್ ಇಲಾಖೆಗೆ ಶ್ವಾನ ಸೇರ್ಪಡೆಯಾಗಲಿದ್ದು, 9 ವರ್ಷ ಅವಧಿಯವರೆಗೂ ಕಾರ್ಯ ನಿರ್ವಹಿಸಲಿದೆ. ಬಳಿಕವೂ ಆರೋಗ್ಯವಾಗಿದ್ದರೆ ಒಂದು ವರ್ಷ ಸೇವೆಯನ್ನು ಮುಂದುವರಿಸಲಾಗುತ್ತದೆ. ನಿವೃತ್ತಿಯ ಬಳಿಕ ಈ ಶ್ವಾನಗಳನ್ನು ಅನಾಥವಾಗಿ ಬಿಡುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ, ವರ್ಷಗಳ ಕಾಲ ಅವುಗಳನ್ನು ಅಕ್ಕರೆಯಿಂದ ಆರೈಕೆ ಮಾಡಿದ ಹ್ಯಾಂಡ್ಲರ್ ತಾವೇ ಅವುಗಳನ್ನು ದತ್ತು ಪಡೆದು ತಮ್ಮ ಮನೆಗೆ ಕರೆದೊಯ್ಯುತ್ತಾರೆ. ಉಳಿದಂತೆ ವಿಶ್ವಾಸಾರ್ಹ ಪ್ರಾಣಿ ದಯಾ ಸಂಘಟನೆಗಳಿಗೆ ವಹಿಸಲಾಗುತ್ತದೆ ಅಥವಾ ಪೊಲೀಸ್ ಇಲಾಖೆಯ ವೃದ್ಧಾಶ್ರಮದಂತಹ ಕೇಂದ್ರಗಳಲ್ಲಿ ಇಟ್ಟು, ಅವುಗಳ ಕೊನೆಯ ಉಸಿರಿರುವವರೆಗೂ ಸೂಕ್ತ ಆರೈಕೆ ಹಾಗೂ ವೈದ್ಯಕೀಯ ನೆರವು ಒದಗಿಸಲಾಗುತ್ತದೆ.

ಯಾವುದೇ ಭ್ರಷ್ಟಾಚಾರ, ಪ್ರತಿಫಲಾಪೇಕ್ಷೆ ಇಲ್ಲದೆ ರಾಜ್ಯದ ಭದ್ರತೆಗಾಗಿ ಹಗಲಿರುಳು ಶ್ರಮಿಸುವ ಈ ಮೂಕ ಜೀವಿಗಳ ಪಡೆಯನ್ನು ಬಲಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಗೃಹ ಇಲಾಖೆಯು ತಕ್ಷಣವೇ ಎಚ್ಚೆತ್ತು, ಖಾಲಿ ಇರುವ 50ಕ್ಕೂ ಹೆಚ್ಚು ಶ್ವಾನಗಳ ನೇಮಕಾತಿಯನ್ನು ಪೂರ್ಣಗೊಳಿಸಿದರೆ ಮಾತ್ರ ಹಾಲಿ ಕರ್ತವ್ಯದಲ್ಲಿರುವ ಶ್ವಾನಗಳ ಮೇಲಿನ ಒತ್ತಡ ಕಡಿಮೆಯಾಗಿ, ಅಪರಾಧ ತಡೆ ಕಾರ್ಯಾಚರಣೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎನ್ನುತ್ತಾರೆ ಶ್ವಾನ ತಜ್ಞರು.

ಈ ಬಗ್ಗೆ ಪಶು ವೈದ್ಯ ಡಾ.ಸುರೇಂದ್ರ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಮನುಷ್ಯರಿಗೂ ಪ್ರಾಣಿಗಳಿಗೂ ಅಷ್ಟೇನೂ ವ್ಯತ್ಯಾಸಗಳಿಲ್ಲ. ನಮೆಗೆ ಉಂಟಾಗುವ ಮಾನಸಿಕ ಒತ್ತಡಗಳು, ಶ್ವಾನಗಳಿಗೂ ಉಂಟಾಗುತ್ತದೆ. ಅತಿಯಾದ ಒತ್ತಡಗಳಿಂದ ಹೃದಯ ಸ್ತಂಭನ, ಮಾನಸಿಕ ಖಿನ್ನತೆಯಿಂದ ಮನುಷ್ಯರ ರೀತಿಯೆ, ಶ್ವಾನಗಳು ಸಹ ಕಾಯಿಲೆ ಇಲ್ಲವೆ ಅಕಾಲಿಕ ಮರಣಗಳಿಗೆ ತುತ್ತಾಗಲಿವೆ. ಡಯಟ್ ಚಾರ್ಟ್ ನೆಪದಲ್ಲಿ ಶ್ವಾನಗಳಿಗೆ ಊಟದ ಪ್ರಮಾಣವನ್ನು ಕಡಿಮೆಗೊಳಿಸಿದರೆ, ಅವುಗಳು ಬದುಕುವುದಾದರೂ ಹೇಗೆ ಎಂದರು.

Read More
Next Story