ಕರಾವಳಿಯ ʼಕಲಿʼಗೆ ಹೈಟೆಕ್ ಸ್ಪರ್ಶ… ಆದರೂ ಸಿಗುತ್ತಿಲ್ಲ ಈ ಬಡವರ ಬಿಯರ್!
ಕರಾವಳಿಯಲ್ಲಿ `ಕುಡ್ಲ ಕಲಿ ಬಾರ್’ ಎಂಬ ಶೇಂದಿ ಮಾರಾಟ-ಸೇವನೆಗೆ ಹೆಚ್ಚು ಅವಕಾಶವಿದ್ದ ಆಧುನಿಕ ಶೇಂದಿ ಅಂಗಡಿ ಕೇವಲ ಒಂದೇ ವರ್ಷದಲ್ಲಿ ವ್ಯವಹಾರ ನಿಲ್ಲಿಸಿದೆ!

ದೈವಗಳ ಆರಾಧನೆಗೂ ನಶೆಗಾಗಿಯೂ ಬಳಸುವ ಶೇಂದಿಯ ಸಂಗ್ರಹಣೆಗೆ ಸೂಕ್ತ ಕಸುಬುದಾರರ ಕೊರತೆಯಿಂದಾಗಿ ಅಗ್ಗದ ರಾಸಾಯನಿಕರಹಿತ ಅಮಲು ಪೇಯ ಬಲು ಬೇಡಿಕೆ ಪಡೆಯುತ್ತಿದೆ. ಶೇಂದಿ ಸಂಗ್ರಹಣೆ ಒಂದು ಸಾಂಪ್ರದಾಯಿಕ ಕುಲಕಸುಬು ಆಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇದನ್ನು ಬಿಲ್ಲವ ಸಮುದಾಯದವರು ಮಾಡುತ್ತಾರೆ. ಈ ಕಸುಬುದಾರರಿಗೆ ಮೂರ್ತೆದಾರರು ಎಂಬ ಹೆಸರಿದೆ. ಶೇಂದಿಯನ್ನು ಗ್ರಾಮೀಣ ಪ್ರದೇಶದಲ್ಲಿ ದೈವಗಳ ಆರಾಧನೆ ಸಂದರ್ಭ ಅಮೃತ ಎಂಬ ಹೆಸರಲ್ಲಿ ಅರ್ಪಣೆ ಮಾಡಲಾಗುತ್ತದೆ. ಹಾಗೆಯೇ ಅಮಲು ಪೇಯವಾಗಿ ಕೂಡಾ ಬಳಸಲಾಗುತ್ತದೆ.
ಶೇಂದಿಯನ್ನು `ಕಳ್ಳುʼ ಎಂದೂ ಕರೆಯಲಾಗುತ್ತದೆ. ಕರಾವಳಿಯ ತುಳು ಭಾಷೆಯಲ್ಲಿ ʻಕಲಿʼ ಎಂದು ಹೇಳಲಾಗುತ್ತದೆ. ಶೇಂದಿ ಸಂಗ್ರಹಣೆ ತ್ರಾಸದ ಕೆಲಸವಾಗಿದ್ದು, ತಾಳೆ ಮರದ ತುದಿಗೆ ದಿನಕ್ಕೆ ಮೂರುಬಾರಿ ತಲುಪಬೇಕಾಗುತ್ತದೆ. ತಾಳೆ ಮರದ ಹೂವಿನ ಕೊಂಬಿನಿಂದ ಶೇಂದಿ ಸಂಗ್ರಹಿಸಲಾಗುವ ಕಾರಣ, ಮರಕ್ಕೆ ಏಣಿ ಇಟ್ಟು ಹತ್ತಬೇಕಾಗುತ್ತದೆ.
ಸಾಮಾನ್ಯವಾಗಿ 15 ಅಡಿಗಿಂತ ಎತ್ತರದ ಮರಗಳೇ ಶೇಂದಿ ಸಂಗ್ರಹಣೆಗೆ ಸೂಕ್ತವಾಗಿದ್ದು, 15-30 ಅಡಿ ಎತ್ತರದ ಮರಗಳಿಂದಲೂ ಶೇಂದಿ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಹೂವಿನ ಕೊಂಬನ್ನು ದಿನಕ್ಕೆ ಮೂರುಬಾರಿ ನಯವಾಗಿ ಕತ್ತರಿಸಬೇಕಾಗಿರುತ್ತದೆ. ಬೆಳಗ್ಗೆ ಒಂದು ಬಾರಿ ಶೇಂದಿ ಸಂಗ್ರಹಿಸಿ, ಮಡಕೆ ಬದಲಾಯಿಸಿದರೆ ಮತ್ತೆ ಮಧ್ಯಾಹ್ನದ ವೇಳೆಗೆ ಮರ ಹತ್ತಿ ಕೊಂಬನ್ನು ಕತ್ತರಿಸಬೇಕಾಗುತ್ತದೆ. ಹಾಗೆಯೇ ಸಂಜೆ ಮತ್ತೆ ಶೇಂದಿ ಸಂಗ್ರಹಿಸಲು ಮರ ಏರಬೇಕಾಗುತ್ತದೆ. ಹೀಗೆ ಮೂರು ಬಾರಿ ಮರ ಏರಬೇಕಾದ ಕಾರಣ ಕಷ್ಟದ ಕೆಲಸವಾಗಿದ್ದು, ಯುವ ಜನಾಂಗದಲ್ಲಿ ಯಾರೂ ಕೂಡಾ ಈ ವೃತ್ತಿಯನ್ನು ಆಯ್ಕೆ ಮಾಡುತ್ತಿಲ್ಲ.
250 ಎಂಎಲ್‌ಗೆ ರೂ.100!
ದಶಕಗಳ ಹಿಂದೆ ಶೇಂದಿ ಅಂಗಡಿಗಳು ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಇದ್ದು, ಒಂದು ಲೀಟರ್ ಶೇಂದಿಗೆ ರೂ.20 ರ ಆಸುಪಾಸು ಇತ್ತು. ಇತ್ತೀಚೆಗೆ 250 ಎಂ.ಎಲ್‌ನ ಒಂದು ಲೋಟಕ್ಕೆ ರೂ.೧೦೦ ಇದೆ. ಪುತ್ತೂರು ಬೆಟ್ಟಂಪಾಡಿಯ ಶೇಂದಿ ಅಂಗಡಿ ಮಾಲಿಕ ಶೇಖರ್ ಸುವರ್ಣ ಹೇಳುವಂತೆ ಎಷ್ಟು ಹಣ ಕೊಟ್ಟರೂ ಕೆಲವೊಮ್ಮೆ ಶೇಂದಿಯೇ ಸಿಗುವುದಿಲ್ಲ. ಶೇಂದಿ ಇನ್ನು ಅತ್ಯಂತ ವಿರಳವಾಗಲಿದೆ. ಆಧುನಿಕ ತಂತ್ರಜ್ಞಾನ ಬಳಸಿ ಯಾರಾದರೂ ಶೇಂದಿ ಸಂಗ್ರಹಿಸಿದರೆ ಸಿಗಬಹುದು” ಎನ್ನುತ್ತಾರೆ.
ಕಾಯಿಲೆಗಳಿಗೂ ರಾಮಮದ್ಧು ಅತಿಯಾದರೆ ಅಮೃತವೂ ವಿಷ ಎಂಬಂತೆ ಒಂದು ಬಾರಿಗೆ ಒಂದು ಲೀಟರಿಗಿಂತ ಹೆಚ್ಚು ಕುಡಿದರೆ ಸಾರ್ವಜನಿಕ ಸ್ಥಳವನ್ನೇ ಹಾಸಿಗೆಯಾಗಿ ಮಾಡಿಕೊಳ್ಳುವಂತಾಗುವುದೂ ಇದೆ. ಆದರೆ ಮಿತವಾದ ಸೇವನೆ ಮಾನವ ದೇಹದಲ್ಲಿ ಪಚನಕ್ರಿಯೆಗೆ ಸಹಕಾರಿಯಾಗಿದ್ದು, ಬರೀ ಹೊಟ್ಟೆಗೆ ಒಂದು ಟೀಸ್ಪೂನ್ ಸೇವಿಸಿದಾಗ ಮಕ್ಕಳ ಹೊಟ್ಟೆಯಲ್ಲಿನ ಜಂತು ಹುಳು ನಿವಾರಣೆಗೂ ಉತ್ತಮವಾಗಿದೆ. ಇದನ್ನು ಮಹಿಳೆಯರು ವೃದ್ಧರೆನ್ನದೇ ಮಲಬದ್ಧತೆ ಸಮಸ್ಯೆ ಇದ್ದರೆ ಸೇವಿಸುತ್ತಾರೆ. ದನ-ಕರುಗಳ ಅಜೀರ್ಣಕ್ಕೂ ಶೇಂದಿಯನ್ನು ಔಷಧಿಯಾಗಿ ನೀಡಲಾಗುತ್ತದೆ.
ತೆಂಗಿನ ಮರ-ಈಚಲ ಮರ
ಶೇಂದಿಗೆ ತಾಳೆ ಮರ ಸೂಕ್ತವಾಗಿದ್ದರೂ ತೆಂಗಿನ ಮರದ ಹೂವಿನ ಕೊಂಬಿನಿಂದಲೂ ಗುಣಮಟ್ಟದ ಶೇಂದಿ ಸಂಗ್ರಹಿಸಲಾಗುತ್ತದೆ. ತೆಂಗಿನ ಮರದ ಶೇಂದಿಯನ್ನು ನೀರಾ ಎಂದು ಕರೆಯಲಾಗುತ್ತದೆ. ಇದು ತುಲನಾತ್ಮಕವಾಗಿ ಸಿಹಿಯಾಗಿದ್ದು, ಸಾಮಾನ್ಯವಾಗಿ ಎಳನೀರು, ತೆಂಗಿನಕಾಯಿಯ ಪೌಷ್ಟಿಕಾಂಶಗಳನ್ನೂ ಹೊಂದಿರುತ್ತದೆ. ತೆಂಗಿನ ಮರದಿಂದ ಶೇಂದಿ ಸಂಗ್ರಹಿಸಿದರೆ ತೆಂಗಿನಕಾಯಿ ಮತ್ತು ಎಳನೀರಿಗೆ ಕೊರತೆಯಾಗುವ ಕಾರಣ ಹೆಚ್ಚಿನ ಜನರು ಶೇಂದಿಗಾಗಿ ತೆಂಗಿನಮರವನ್ನು ಆಶ್ರಯಿಸುವುದಿಲ್ಲ.
ಕೇರಳ ಮತ್ತು ತಮಿಳುನಾಡಿನ ಹೆಚ್ಚಿನ ಭಾಗಗಳಲ್ಲಿ ತೆಂಗಿನ ಮರದಿಂದಲೇ ಶೇಂದಿ ಸಂಗ್ರಹಿಸುತ್ತಾರೆ. ವೈಯಕ್ತಿಕ ಮತ್ತು ಕುಟುಂಬ ಸದಸ್ಯರ ಬಳಕೆಗಾಗಿ ಶೇಂದಿ ಸಂಗ್ರಹಿಸುವ ಮಂದಿ ಈಚಲಮರವನ್ನು ಆಶ್ರಯಿಸುತ್ತಾರೆ. ಇದರಲ್ಲಿ ತಾಳೆ ಮರಕ್ಕೆ ಹೋಲಿಸಿದರೆ ಶ್ರಮ ಕಡಿಮೆ ಇರುತ್ತದೆ. ದಿನಾ ಮರಕ್ಕೆ ಹತ್ತಬೇಕಾದ ಪ್ರಮೇಯ ಇಲ್ಲವಾಗಿದ್ದು, ದಾರದ ಮೂಲಕ ಮರದ ಬುಡಕ್ಕೇ ಶೇಂದಿ ಬರುತ್ತದೆ. ಈ ಶೇಂದಿ ಹೆಚ್ಚಿನ ಅಮಲು ಹೊಂದಿದ್ದು, ಆರೋಗ್ಯದ ದೃಷ್ಟಿಯಿಂದಲೂ ಸೇವನೆಗೆ ಸಲಹಾತ್ಮಕವಾಗಿಲ್ಲ.
ಬೆಲ್ಲ-ಸಕ್ಕರೆ ನೀರು!
ಕರಾವಳಿ ಕರ್ನಾಟಕದ ಬಹುತೇಕ ದೈವಗಳ ಪೂಜೆ-ಉತ್ಸವ ಸಂದರ್ಭ ಶೇಂದಿಯನ್ನು ಕಡ್ಡಾಯ ಎಂಬಂತೆ ಅರ್ಪಿಸುತ್ತಾರೆ. ಅರ್ಪಣೆ ಸಣ್ಣ ಪ್ರಮಾಣದಾದ್ದರೂ ಸಂಪ್ರದಾಯದಂತೆ ಇದು ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶೇಂದಿಯ ಬದಲಿಗೆ ಬೆಲ್ಲ ಅಥವಾ ಸಕ್ಕರೆ ನೀರನ್ನು ಅರ್ಪಿಸುವುದು ಕಾಲಕ್ಕೆ ತಕ್ಕಂತೆ ಹೊಂದಾಣಿಕೆಯಾಗುವ ಕ್ರಮವಾಗಿದೆ.
ಹತ್ತು ವರ್ಷಗಳ ಹಿಂದೆ 20ಕ್ಕೂ ಹೆಚ್ಚು ಮರಗಳಿಗೆ ಹತ್ತಿ ಶೇಂದಿ ಸಂಗ್ರಹಿಸುತ್ತಿದ್ದ 70ರ ಹರೆಯದ ಭುಜಂಗ ಪೂಜಾರಿಯವರು ಹೇಳುವಂತೆ “ಈಗ ತಾಳೆ ಮರಗಳೇ ಕಡಿಮೆಯಾಗಿದೆ. ಹಾಗೆಯೇ ಯುವಕರು ಈ ವೃತ್ತಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ದೈವಗಳ ಸೇವೆಗೆ ಕೂಡಾ ಜನ ಶೇಂದಿದಾಗಿ ಊರಿಡೀ ಅಲೆದರೂ ಸಿಗುತ್ತಿಲ್ಲ. ಬಹುತೇಕ ಈ ವೃತ್ತಿ ಮಾಯವಾಗಿದೆ. ಅಗ್ಗದ ಮದ್ಯ ಬಾರ್, ವೈನ್ ಶಾಪ್‌ಗಳಲ್ಲಿ ದೊರಕುವ ಕಾರಣ ಶೇಂದಿಯನ್ನು ಅಮಲಿಗಾಗಿ ಕುಡಿಯುವವರು ಅತ್ತ ವಾಲಿದ್ದಾರೆ. ದಶಕಗಳ ಹಿಂದೆ ಸಾರಾಯಿ ಅಗ್ಗದ ದರದಲ್ಲಿ ದೊರಕಲು ಆರಂಭವಾದ ಮೇಲೆ ಶೇಂದಿಯ ಬೇಡಿಕೆಗೆ ಪೂರ್ಣವಿರಾಮದ ಸೂಚನೆಗಳು ಬಂದಿದ್ದವು. ಈಗ ಅದು ನಿಜವಾಗುತ್ತಿದೆ” ಎನ್ನುತ್ತಾರವರು.
ಶೇಂದಿ ಮಾರಾಟದ ಭರಾಟೆ ಇದ್ದ ಕಾಲದಲ್ಲಿ ಅದಕ್ಕೆ ಕೃತಕವಾಗಿ ಮತ್ತು ಬರಿಸುವ ರಾಸಾಯನಿಕಗಳನ್ನೂ ಬಳಸಲಾಗುತ್ತಿತ್ತು. ಇನ್ನು ನೀರು ಬೆರಸುವುದು, ಬೆಳ್ತಿಗೆ ಅಕ್ಕಿಯ ಪುಡಿ, ಹಸಿ ಮರಗೆಣಸಿನ ಹಾಲು, ಇಂತಹಾ ಕಲಬೆರಕೆ ಕೂಡಾ ಚಾಲ್ತಿಯಲ್ಲಿತ್ತು. ಆದರೂ ಶೇಂದಿ ನೈಸರ್ಗಿಕ ಪೇಯ ಎಂಬ ಹೆಸರು ಉಳಿಸಿಕೊಂಡಿತ್ತು.
ಶೇಂದಿ ಬೆಲ್ಲ
ಶೇಂದಿ ಕುಡಿಯಲು ಇಷ್ಟವಿಲ್ಲದವರು ಶೇಂದಿಯಿಂದ ತಯಾರಿಸಿದ ಬೆಲ್ಲವನ್ನು ಆರೋಗ್ಯದ ಕಾರಣಗಳಿಗೆ ಬಳಸುತ್ತಾರೆ. ಶೇಂದಿಯ ಬೆಲ್ಲದಲ್ಲಿ ನಶೆ ಇಲ್ಲವಾಗಿದ್ದು, ಎಲ್ಲಾ ವರ್ಗದ ಜನರು ಬಳಸುತ್ತಾರೆ. ಇದು ಹೊಟ್ಟೆಗೆ ಸಂಬಂಧಿಸಿದ ರೋಗಗಳ ನಿವಾರಣೆಗೆ ಉತ್ತಮವಾಗಿದ್ದು, ಮಹಿಳೆಯರ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೂ ಪರಿಣಾಮಕಾರಿಯಾಗಿದೆ. ಮಧುಮೇಹಿಗಳಿಗೂ ನೈಸರ್ಗಿಕ ಸಿಹಿಯಾಗಿ ಬಳಸುತ್ತಾರೆ. ಇತ್ತೀಚಿನ ದಶಕಗಳಲ್ಲಿ ಒಂದು ಕೆ.ಜಿ. ಬೆಲ್ಲ ಸುಮಾರು ರೂ.1200-1500 ವರೆಗೆ ಮಾರಾಟವಾಗುತ್ತಿದ್ದು ಅದೂ ಕೂಡಾ ಲಭ್ಯತೆ ಕಡಿಮೆ ಇದೆ. ಈ ಬೆಲ್ಲವನ್ನು ಶೇಂದಿಯನ್ನು ಅಧಿಕ ಉಷ್ಣತೆಯಲ್ಲಿ ಕುದಿಸಿ ಒಣಗಿಸಿ ತಯಾರಿಸಲಾಗುತ್ತದೆ.
ಕುಡ್ಲ ಕಲಿ ಬಾರ್
ಮಂಗಳೂರಿನಲ್ಲಿ `ಕುಡ್ಲ ಕಲಿ ಬಾರ್’ ಎಂಬ ಶೇಂದಿ ಮಾರಾಟ-ಸೇವನೆಗೆ ಹೆಚ್ಚು ಅವಕಾಶವಿದ್ದ ಆಧುನಿಕ ಶೇಂದಿ ಅಂಗಡಿ ಕೇವಲ ಒಂದೇ ವರ್ಷದಲ್ಲಿ ವ್ಯವಹಾರ ನಿಲ್ಲಿಸಿದೆ. ಇದಕ್ಕೆ ಶೇಂದಿ ಕೊರತೆಯೇ ಕಾರಣವಾಗಿತ್ತು. ಕೇರಳದ ಕಾಸರಗೋಡಿನಲ್ಲಿಯೂ ಆಧುನಿಕ ಶೇಂದಿ ಅಂಗಡಿ ಇದ್ದಿದ್ದು, ಅದೂ ಕೂಡಾ ಶೇಂದಿ ಲಭ್ಯತೆಯ ಕೊರತೆಯ ಕಾರಣ ಬರೀ ಹೊಟೇಲ್ ಆಗಿ ಉಳಿದುಕೊಂಡಿದೆ. ಈ ಹೊಟೇಲ್ ಮಾಲಿಕ ವಿಜಯಾನಂದ್, ಶೇಂದಿ ಇದ್ದಾಗ ಒಳ್ಳೆಯ ವ್ಯಾಪಾರ ಇತ್ತು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಕ್ರಮೇಣ ಶೇಂದಿ ಕಡಿಮೆಯಾಗಿ ಈಗ ಜೀವನೋಪಾಯಕ್ಕಾಗಿ ಕೇವಲ ಹೊಟೇಲ್ ನಡೆಸುತ್ತಿದ್ದೇನೆ. “ಶೇಂದಿ ಸಂಗ್ರಾಹಕರು ಕಡಿಮೆಯಾಗಿದ್ದಾರೆ, ಹಾಗಾಗಿ ಶೇಂದಿ ಮಾಯವಾಗುತ್ತಿದೆ” ಎನ್ನುತ್ತಾರೆ.
`ನೀರಾ’
ತೆಂಗಿನಮರದ ಕೊಂಬಿನಿಂದ ಸಂಗ್ರಹಿಸಲಾದ ಶೇಂದಿಯನ್ನು ನೀರಾ ಎಂಬ ಹೆಸರಿನಲ್ಲಿ ಮೌಲ್ಯವರ್ಧಿತ ಉತ್ಪನ್ನವಾಗಿ ಮಾರಾಟ ಮಾಡಲಾಗುತ್ತಿದ್ದರೂ, ವಾಣಿಜ್ಯಿಕವಾಗಿ ಅಷ್ಟೊಂದು ಜನಪ್ರಿಯವಾಗಿಲ್ಲ. ಶೇಂದಿಗೆ ಪರ್ಯಾಯವಾಗಬಹುದಾಗಿದ್ದರೂ, ಶೇಂದಿ ಪ್ರಿಯರಿಗೆ ನೀರಾ ಅಷ್ಟೊಂದು ನಶೆ ಕೊಟ್ಟಿಲ್ಲ. ನೀರಾ ತಯಾರಿಕೆಗೂ ಶೇಂದಿ ಸಂಗ್ರಹಿಸದಷ್ಟೇ ಶ್ರಮವಿದ್ದು, ಕೆಲವೊಮ್ಮೆ ಕೃತಕ ಸಿಹಿ ಬಳಸಲಾಗುತ್ತದೆ.
ಮರಗಳು ಕಡಿಮೆಯಾಗಿವೆ!
ಮರಗಳು ಎತ್ತರವಾಗಿರುವ ಕಾರಣ ಬೇಗನೇ ಸಿಡಿಲಿಗೆ ಬಲಿಯಾಗುತ್ತವೆ. ಖಾಸಗಿ ಗುಡ್ಡಪ್ರದೇಶಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸಿರುವ ಕಾರಣ ತಾಳೆ ಮರಗಳ ಸಂಖ್ಯೆಯೂ ಕಡಿಮೆಯಾಗಿದೆ. ಹಾಗೆಯೇ ಮರ ಹತ್ತಲು ಬಳಸುವ ಬಿದಿರಿನ ಏಣಿಗಳ ಕೊರತೆ ಇದ್ದು, ಲೋಹದ ಏಣಿಗಳಿಗೆ ಹೆಚ್ಚಿನ ಹಣ ಹೂಡಿಕೆ ಅಗತ್ಯವಿರುತ್ತದೆ. ಹಾಗೆಯೇ ಶೇಂದಿ ಸಂಗ್ರಹಣೆಗೆ ಬಳಸುವ ಕತ್ತಿಯನ್ನು ತರ‍್ಕತ್ತಿ ಎಂದು ಕರೆಯಲಾಗುತ್ತದೆ. ಇದು ಕೂಡಾ ವಿಶೇಷ ವಿನ್ಯಾಸದ್ದಾಗಿದ್ದು, ಅದೇ ತೆರನಾದ ಕತ್ತಿ ತಯಾರಿಸುವ ಕಮ್ಮಾರರು ದೊರಕುತ್ತಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೇ ಕತ್ತಿಗಳು ಈ ವೃತ್ತಿಗೆ ಹೊಂದುತ್ತಿಲ್ಲ. ತಾಳೆ ಮರದಲ್ಲಿ ಶೇಂದಿ ಸಂಗ್ರಹಕ್ಕಾಗಿ ಇಡುವ ಮಣ್ಣಿನ ಮಡಕೆಗಳ ಲಭ್ಯತೆ ಇಲ್ಲವಾದರೂ, ಪ್ಲಾಸ್ಟಿಕ್ ಮಡಕೆಗಳು ಆ ಜಾಗವನ್ನು ಆಕ್ರಮಿಸುತ್ತಿವೆ.
ಮೂರ್ತೆದಾರರ ಸಂಘ
ಶೇಂದಿ ಸಂಗ್ರಾಹಕರು ಮೂರ್ತೆದಾರರ ಸಂಘ ರಚಿಸಿಕೊಂಡಿದ್ದು, ಈ ಮೂಲಕ ಮೂರ್ತೆದಾರರಿಗೆ ಧನಸಹಾಯ ನೀಡುವ ಕಾರ್ಯ ನಡೆದಿದೆ. ಇತ್ತೀಚೆಗೆ ಸಂಘದ ಮೂಲಕ ಬ್ಯಾಂಕಿಂಗ್ ಚಟುವಟಿಕೆ ನಡೆಯುತ್ತಿದೆ.
ತಂತ್ರಜ್ಞಾನ ಯುಗದಲ್ಲಿ ಡ್ರೋನ್ ಮೂಲಕ ಶೇಂದಿ ಸಂಗ್ರಹಣೆ ಬಗ್ಗೆ ಪ್ರಯೋಗಗಳು ನಡೆದಿದ್ದರೂ ಯಶಸ್ವಿಯಾಗಿ ಯಾರೂ ಕೂಡಾ ಅಳವಡಿಸಿಕೊಂಡಿಲ್ಲ. ಅತಿಯಾದ ಬಳಕೆ ಆರೋಗ್ಯಕ್ಕೆ ಹಾನಿಯಾದರೂ, ಸಾಂಪ್ರದಾಯಿಕ ಮತ್ತು ನೈಸರ್ಗಿಕ ಪೇಯವಾಗಿ ಉತ್ಪಾದನೆಯಿಂದಲೇ ಮಾಯವಾಗುವ ಸಾಧ್ಯತೆಗಳಿವೆ.

