ಮಲ್ಲಿಗೆ : ‘ಜಿಐ ಟ್ಯಾಗ್’ ಮಾನ್ಯತೆ ಇದ್ದರೂ ಆತಂಕದಲ್ಲಿದ್ದಾಳೆ ʻಶ್ವೇತ ಸುಂದರಿʼ
x
ಮಲ್ಲಿಗೆ ಕೃಷಿ

ಮಲ್ಲಿಗೆ : ‘ಜಿಐ ಟ್ಯಾಗ್’ ಮಾನ್ಯತೆ ಇದ್ದರೂ ಆತಂಕದಲ್ಲಿದ್ದಾಳೆ ʻಶ್ವೇತ ಸುಂದರಿʼ

ಮಲ್ಲಿಗೆ ಕೃಷಿ: ದಿನನಿತ್ಯ ಆದಾಯ ನೀಡುವ ಸುವಾಸಿತ ಉದ್ಯಮ! ಕರಾವಳಿಯಿಂದ ಬಯಲುಸೀಮೆಯವರೆಗೆ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಈ ಬಿಳಿ ʼಚಿನ್ನ'ದ ಕೃಷಿಗೆ ಸಮಸ್ಯೆಗಳು ನೂರಾರು!


ಮೈಸೂರು ಮಲ್ಲಿಗೆ ಕವಿ ಕೆ.ಎಸ್‌. ನರಸಿಂಹ ಸ್ವಾಮಿಯವರ ಕವನದಲ್ಲಿ ಇವಳದೇ ವರ್ಣನೆ! ಆಗಷ್ಟೇ ಮದುವೆಯಾದ ಪತಿರಾಯ ತನ್ನ ಪತ್ನಿಯನ್ನು ಕಾಣಲು ಮಾವನ ಮನೆಗೆ ಬಂದಾಗ "...ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು..." ಎಂಬುದು ಅವರ ಬಣ್ಣನೆ. ಜತೆಗೆ "ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ... ಬರುವ ಕಂಪಿನ ಹೆಸರು ಪ್ರೇಮವೆಂದು," ಎಂಬುದು ಅವರದೇ ವರ್ಣನೆ...

ʼಆ ಹಾ ಹ ಮಲ್ಲಿಗೆ.. ನಾ ಬರುವೆ ನಿನ್ನಲ್ಲಿಗೆ..." ಎಂಬುದು ದ.ರಾ. ಬೇಂದ್ರಯವರ ಹಾಡು.. ಬಿ.ಅರ್‌. ಲಕ್ಷ್ಮಣ ರಾವ್‌ ಅವರ ಲೇಖನಿಯ "ಮಲ್ಲಿಗೆಯ ಮಾಲೆ, ಮನದ ಹೂಮಾಲೆ, ಬಿಳಿಬಿಳಿ ಬಣ್ಣದ, ಸುಗಂಧದ ಸುರಿಮಳೆ..." ಎಂಬ ತಂಗಾಳಿಯ ಜಾಡು...

ಹೀಗೆ ಕವಿಗಳ, ಪ್ರೇಮಿಗಳ ಅಕ್ಕರೆಯ ಮಲ್ಲಿಗೆ ಹೂವು ಕರುನಾಡಿನ ಮನಸ್ಸಿನಲ್ಲಿ ಹಾಸುಹೊಕ್ಕಿದೆ. ಅಷ್ಟೇ ಯಾಕೆ? ಕರ್ನಾಟಕದ ಮಣ್ಣಿನಲ್ಲೂ ಮಲ್ಲಿಗೆ ಎನ್ನುವುದು ಕೇವಲ ಒಂದು ಹೂವಲ್ಲ, ಅದೊಂದು 'ಸುವಾಸಿತ ಉದ್ಯಮ'. ʼಕವಿ ಕಾಲʼದಿಂದ ಒಂದು ಹೆಜ್ಜೆ ಮುಂದೆ ಹೋದರೆ, ಅದು ಎಷ್ಟೋ ಮಹಿಳೆಯರ ಮುಡಿಗೇರಿ ಅವರ ಸೌಂದರ್ಯಕ್ಕೆ ಮೆರುಗು ನೀಡುವ ಹೂವಾಗಿರದೆ, ಜೀವನಾಧಾರವೂ ಆಗಿದೆ!

ವರ್ಷವಿಡೀ ಕೈತುಂಬಾ ಕಾಸು ನೀಡುವ, ಅತಿ ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಲಾಭ ತಂದುಕೊಡುವ ಮಲ್ಲಿಗೆಯ ಕೃಷಿ, ಇವತ್ತು ಹಳ್ಳಿ ಹಳ್ಳಿಗಳ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಅದರಲ್ಲೂ ಕರಾವಳಿಯ ಶಂಕರಪುರದಿಂದ ಹಿಡಿದು ಸಾಂಸ್ಕೃತಿಕ ನಗರಿ ಮೈಸೂರಿನವರೆಗೆ, ಅಥವಾ ಹೆಸರಿನಲ್ಲೇ ಹೂವು ಇರುವ ಹೂವಿನ ಹಡಗಲಿಯಾಗಲೀ ಮಲ್ಲಿಗೆಯು ಲಕ್ಷಾಂತರ ಕುಟುಂಬಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದೆ. ನೀವು ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು, ದಿನನಿತ್ಯದ ಆದಾಯ ತರುವ ಲಾಭದಾಯಕ ಹಾದಿ ಹುಡುಕುತ್ತಿದ್ದರೆ, ಮಲ್ಲಿಗೆಯ ಸುವಾಸನೆಯೇ ದಾರಿದೀಪ!

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಮಲ್ಲಿಗೆ ಕೃಷಿಯು ಕೇವಲ ಒಂದು ಕಸುಬಾಗಿ ಉಳಿಯದೆ, ಸಾವಿರಾರು ಮಹಿಳೆಯರ ಬದುಕಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ನೀಡುತ್ತಿರುವ ಒಂದು ಪ್ರಬಲ ಶಕ್ತಿಯಾಗಿದೆ. ಹೂವಿನ ಘಮದಷ್ಟೇ ಸುಂದರವಾಗಿ ಮಹಿಳೆಯರು ತಮ್ಮ ಬದುಕನ್ನು ಈ ಕೃಷಿಯ ಮೂಲಕ ಕಟ್ಟಿಕೊಳ್ಳುತ್ತಿದ್ದಾರೆ.

ಕರ್ನಾಟಕದ ಮಲ್ಲಿಗೆ ಕೃಷಿಯಲ್ಲಿ ಮುಖ್ಯವಾಗಿ ಮೂರು ವಿಧದ ತಳಿಗಳು ಪ್ರಸಿದ್ಧವಾಗಿದ್ದು, ಅವುಗಳಲ್ಲಿ ಅತ್ಯಂತ ಸುಗಂಧಭರಿತ ಹಾಗೂ ಹಳದಿ ಮಿಶ್ರಿತ ಬಿಳಿ ಬಣ್ಣದ ಮೊಗ್ಗುಗಳನ್ನು ಹೊಂದಿರುವ ಮೈಸೂರು ಮಲ್ಲಿಗೆ ಮೊದಲನೆಯದಾದರೆ, ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ, ಉದ್ದನೆಯ ಮೊಗ್ಗುಗಳ ಉಡುಪಿ ಮಲ್ಲಿಗೆ (ಶಂಕರಪುರ ಮಲ್ಲಿಗೆ) ಎರಡನೆಯದಾಗಿದೆ. ಬಾಡದೇ ಸುದೀರ್ಘ ಕಾಲ ಉಳಿಯುವ ಹೂವಿನ ಹಡಗಲಿಯ ಮಲ್ಲಿಗೆ ಕೂಡ ಪಟ್ಟಿಯಲ್ಲಿದೆ. ಇನ್ನು ಈ ಮೂರು ನಗರಗಳು ಮಲ್ಲಿಗೆ ಕೃಷಿಯ ವಿಶಿಷ್ಟತೆಗಾಗಿ ಜಿಐ ಟ್ಯಾಗ್ (GI Tag) ಕೂಡ ಪಡೆದಿದೆ.

ಏನಿದು GI ಟ್ಯಾಗ್‌?

GI Tag ಎಂದರೆ ಭೌಗೋಳಿಕ ಸೂಚ್ಯಂಕ. ಸರಳವಾಗಿ ಹೇಳುವುದಾದರೆ, ಇದು ಒಂದು ನಿರ್ದಿಷ್ಟ ಪ್ರದೇಶಕ್ಕೆ ಅಥವಾ ಊರಿಗೆ ಸೇರಿದ ವಿಶಿಷ್ಟ ಉತ್ಪನ್ನಗಳಿಗೆ ನೀಡಲಾಗುವ ಗುಣಮಟ್ಟದ ಮುದ್ರೆ. ಕರ್ನಾಟಕದ ಮೂರು ಪ್ರಮುಖ ಮಲ್ಲಿಗೆ ತಳಿಗಳಾಗಿರುವ ಉಡುಪಿ, ಮೈಸೂರು ಮತ್ತು ಹಡಗಲಿ ಮಲ್ಲಿಗೆ ಈ ಪ್ರತಿಷ್ಠಿತ ಗೌರವವನ್ನು ಪಡೆದಿವೆ.

GI Tag ನಿಂದ ರೈತರಿಗಾಗುವ ಲಾಭಗಳೇನು?

ಮಲ್ಲಿಗೆ ಕೃಷಿಯಲ್ಲಿ ಭೌಗೋಳಿಕ ಸೂಚ್ಯಂಕ (GI Tag) ದೊರೆಯುವುದರಿಂದ ರೈತರಿಗೆ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ, ಇದು ಜಾಗತಿಕ ಮಟ್ಟದ ಗುರುತನ್ನು ತಂದುಕೊಡುತ್ತದೆ, ಇದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ವಿಶಿಷ್ಟ ಹೂವುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿ ಉತ್ತಮ ಬೆಲೆ ಸಿಗುತ್ತದೆ. ಎರಡನೆಯದಾಗಿ, ಇದು ಭದ್ರವಾದ ಕಾನೂನು ರಕ್ಷಣೆಯನ್ನು ಒದಗಿಸುತ್ತದೆ; ಅಂದರೆ ಬೇರೆ ಯಾವುದೇ ಪ್ರದೇಶದವರು ಈ ಬ್ರಾಂಡ್ ಹೆಸರನ್ನು ಬಳಸುವಂತಿಲ್ಲ, ಇದು ಕೇವಲ ಮೂಲ ಪ್ರದೇಶದ ಬೆಳೆಗಾರರಿಗೆ ಮಾತ್ರ ಸೀಮಿತವಾಗಿರುವುದರಿಂದ ಅವರ ಹಿತರಕ್ಷಣೆ ಸಾಧ್ಯವಾಗುತ್ತದೆ. ಅಂತಿಮವಾಗಿ, ಇದು ಉತ್ಪನ್ನದ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಭರವಸೆಯನ್ನು ಮೂಡಿಸುತ್ತದೆ, ಹೀಗಾಗಿ ಗ್ರಾಹಕರು ಹೆಚ್ಚಿನ ಬೆಲೆ ನೀಡಲು ಹಿಂಜರಿಯುವುದಿಲ್ಲ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ನೇರವಾಗಿ ಹೆಚ್ಚಿನ ಲಾಭ ದೊರೆಯಲು ಸಹಕಾರಿಯಾಗುತ್ತದೆ.

ಸುಗಂಧಕ್ಕಷ್ಟೇ ಅಲ್ಲ… ಆರೋಗ್ಯಕ್ಕೂ ಬೇಕು ಮಲ್ಲಿಗೆ

ಭಾರತೀಯ ಸಂಸ್ಕೃತಿಯಲ್ಲಿ ಮಲ್ಲಿಗೆಗೆ ವಿಶೇಷ ಸ್ಥಾನವಿದೆ. ದೇವಸ್ಥಾನಗಳಲ್ಲಿ ದೇವರ ಪೂಜೆಗೆ, ವಿಗ್ರಹಗಳಿಗೆ ಹಾರಗಳನ್ನು ಅರ್ಪಿಸಲು ಇದನ್ನು ಬಳಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಮಹಿಳೆಯರು ತಮ್ಮ ಜಡೆ ಅಥವಾ ಮುಡಿಗೆ ಮಾಲೆ ರೂಪದಲ್ಲಿ ಧರಿಸುವುದು ಒಂದು ಸುಂದರ ಸಂಪ್ರದಾಯವಾಗಿದೆ. ಮದುವೆ, ಹಬ್ಬ ಹರಿದಿನಗಳು ಮತ್ತು ಶುಭ ಸಮಾರಂಭಗಳ ಅಲಂಕಾರದಲ್ಲಿ ಮಲ್ಲಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಮದುವಣಗಿತ್ತಿಗೆ, ಮೊದಲ ಬಾರಿಗೆ ಗರ್ಭಿಣಿಯಾದವಳ ಬಯಕೆ (ಸೀಮಂತ)ಗೆ, ಕರಾವಳಿ ಭಾಗದಲ್ಲಂತೂ ದೈವಾರಾಧನೆಗಂತೂ ಘಮ್ಮೆನ್ನುವ ಮಲ್ಲಿಗೆ ಬೇಕೇಬೇಕು.

ಕರಾವಳಿಯ ಭೂತಾರಾಧನೆಯಲ್ಲೂ ಮಲ್ಲಿಗೆಯದೇ ಅಲಂಕಾರ (ಚಿತ್ರದಲ್ಲಿರುವುದು ಕಲ್ಲುರ್ಟಿ ದೈವ)

ಸುಗಂಧ ದ್ರವ್ಯ ಮತ್ತು ಸೌಂದರ್ಯವರ್ಧಕ ಉದ್ದೇಶ: ಮಲ್ಲಿಗೆಯಿಂದ ತೆಗೆದ ಸಾರವನ್ನು (Essential Oil) ದುಬಾರಿ ಸುಗಂಧ ದ್ರವ್ಯಗಳು, ಬಾಡಿ ಸ್ಪ್ರೇ ಮತ್ತು ಅತ್ತರ್ ತಯಾರಿಸಲು ಬಳಸಲಾಗುತ್ತದೆ. ಸೋಪುಗಳು, ಶಾಂಪೂಗಳು, ಲೋಶನ್‌ಗಳು ಮತ್ತು ಹೇರ್ ಆಯಿಲ್‌ಗಳಲ್ಲಿ ಇದರ ನೈಸರ್ಗಿಕ ಸುಗಂಧವನ್ನು ಬಳಸಲಾಗುತ್ತದೆ.

ಔಷಧೀಯ ಗುಣಗಳು: ಆಯುರ್ವೇದದಲ್ಲಿ ಮಲ್ಲಿಗೆಯನ್ನು ಅನೇಕ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದರ ಎಲೆ ಮತ್ತು ಹೂವುಗಳನ್ನು ಗಾಯಗಳನ್ನು ಗುಣಪಡಿಸಲು, ಚರ್ಮದ ಕಿರಿಕಿರಿ ನಿವಾರಿಸಲು ಮತ್ತು ಕಣ್ಣಿನ ಉರಿಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.

ಆಹಾರ ಮತ್ತು ಪಾನೀಯ: ಜಾಗತಿಕವಾಗಿ ಮಲ್ಲಿಗೆಯನ್ನು ಚಹಾ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಚೀನಾದಲ್ಲಿ ಮಲ್ಲಿಗೆ ಚಹಾ ಅತ್ಯಂತ ಜನಪ್ರಿಯ. ಇದು ದೇಹಕ್ಕೆ ತಂಪು ನೀಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಕೆಲವು ಸಿಹಿತಿಂಡಿಗಳಿಗೆ ಮತ್ತು ಐಸ್‌ಕ್ರೀಮ್‌ಗಳಿಗೆ ಸುವಾಸನೆ ನೀಡಲು ಕೂಡ ಇದನ್ನು ಬಳಸಲಾಗುತ್ತದೆ.

ಮದುವಣಗಿತ್ತಿಯ ಜಡೆಯಲ್ಲಿ ಮಲ್ಲಿಯದೇ ಕಾರುಬಾರು

GIT ಮಾನ್ಯತೆ ಇದ್ದರೂ ಪ್ರಯೋಜನವಿಲ್ಲ

ಅಂತರಾಷ್ಟ್ರೀಯ ಮಾನ್ಯತೆ (GI Tag) ಸಿಕ್ಕಿದ್ದರೂ ಸಹ, ಸ್ಥಳೀಯ ರೈತರಿಗೆ ಅದರ ಲಾಭ ತಲುಪುತ್ತಿಲ್ಲ ಎಂಬುದು ಹೂವಿನ ಹಡಗಲಿ ರೈತರ ಅಳಲು. ಸರ್ಕಾರದಿಂದಾಗಲೀ ಅಥವಾ ಅಧಿಕಾರಿಗಳಿಂದಾಗಲಿ ಯಾವುದೇ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಹೂವಿನ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಬೆಂಬಲದ ಕೊರತೆಯಿಂದಾಗಿ ಸ್ಥಳೀಯ ಮಾರುಕಟ್ಟೆಯಿಂದ ಹೊರಬಂದು ಅಂತರಾಷ್ಟ್ರೀಯ ಮಾರುಕಟ್ಟೆ ತಲುಪಲು ಸಾಧ್ಯವಾಗುತ್ತಿಲ್ಲ.

ಹೂವಿನ ಹಡಗಲಿ ತಾಲೂಕಿನ ವಿನೋಬಾನಗರದ ಮಲ್ಲಿಗೆ ಬೆಳೆಗಾರರಾದ ಗೋಲಾರ್ ಮಹಾಂತೇಶ್ ಅವರು ʻದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ್ದು, ಮಲ್ಲಿಗೆ ಕೃಷಿಯ ಪ್ರಸ್ತುತ ಸ್ಥಿತಿಗತಿ, ಎದುರಿಸುತ್ತಿರುವ ಸವಾಲುಗಳು ಮತ್ತು ಸರ್ಕಾರದ ಮುಂದಿರುವ ಬೇಡಿಕೆಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ. "ಕಳೆದ ಐದು ವರ್ಷಗಳಿಂದ ಮಲ್ಲಿಗೆ ಕೃಷಿ ಕುಸಿಯುತ್ತಿದೆ. ಜಿಐ ಟ್ಯಾಗ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಸರ್ಕಾರವು ನಮಗೆ ಮಾರ್ಕೆಟಿಂಗ್ ವ್ಯವಸ್ಥೆ ಮತ್ತು ಶೈತ್ಯಾಗಾರ ಸೌಲಭ್ಯ ಒದಗಿಸಿದರೆ ಮಾತ್ರ ಈ ಸುವಾಸಿತ ಬೆಳೆ ಉಳಿಯಲು ಸಾಧ್ಯ. ಮಲ್ಲಿಗೆಯಿಂದ ಸುಗಂಧ ದ್ರವ್ಯ, ಎಣ್ಣೆ ಅಥವಾ ಇತರ ಪರ್ಯಾಯ ಉತ್ಪನ್ನಗಳ ಉತ್ಪಾದನಾ ಘಟಕಗಳು ಇಲ್ಲಿಲ್ಲ. ಇದು ಮಲ್ಲಿಗೆ ಕೃಷಿ ಕುಸಿಯಲು ಒಂದು ಕಾರಣವಾಗಿದೆ" ಎಂದಿದ್ದಾರೆ.

ಮಲ್ಲಿಗೆ ಕೃಷಿಯಲ್ಲಿ ತೊಡಗಿರುವ ಮಹಿಳೆಯರು

“ವರ್ಷ ಜನವರಿಯಲ್ಲಿ ಗಿಡಗಳನ್ನು ಒಂದು ಹಂತಕ್ಕೆ ಕತ್ತರಿಸಿ, ಅದಕ್ಕೆ ನೀರು ಮತ್ತು ಗೊಬ್ಬರವನ್ನು ನೀಡಲಾಗುತ್ತದೆ. ಮಾರ್ಚ್ ಎರಡನೇ ವಾರದಿಂದ ಹೂವು ಬಿಡಲು ಆರಂಭವಾಗಿ, ಅಕ್ಟೋಬರ್‌ವರೆಗೆ ನಿರಂತರವಾಗಿ ಇಳುವರಿ ಸಿಗುತ್ತದೆ. ಮಲ್ಲಿಗೆ ಕೃಷಿಯಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು, ಆದರೆ ಸದ್ಯಕ್ಕೆ ಇದು ಕೃಷಿಕರನ್ನು ಹೈರಾಣಾಗಿಸಿದೆ. ಒಂದು ಎಕರೆ ಮಲ್ಲಿಗೆ ತೋಟಕ್ಕೆ ಸುಮಾರು 10 ರಿಂದ 12 ಕಾರ್ಮಿಕರ ಅವಶ್ಯಕತೆ ಇರುತ್ತದೆ. ಒಬ್ಬ ಕಾರ್ಮಿಕ ದಿನಕ್ಕೆ ಕೇವಲ 1 ರಿಂದ 5 ಕೆಜಿ ಹೂವು ಬಿಡಿಸಲು ಸಾಧ್ಯ.

ಮಲ್ಲಿಗೆ ಬೆಳೆಯುವ ಸಮಯದಲ್ಲಿಯೇ ಸರ್ಕಾರದ ಉದ್ಯೋಗ ಖಾತರಿ ಕೆಲಸಗಳು ಆರಂಭವಾಗುವುದರಿಂದ ಕಾರ್ಮಿಕರ ಕೊರತೆ ಎದುರಾಗುತ್ತದೆ. ಈ ಯೋಜನೆಯನ್ನು ತೋಟಗಾರಿಕೆ ಬೆಳೆಗಳಿಗೆ ಅಟ್ಯಾಚ್ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯ” ಎಂದು ಅವರು ತಿಳಿಸಿದ್ದಾರೆ.

ಸ್ವಂತ ಊರಿನಲ್ಲೇ ಮಹಿಳೆಯರಿಗೆ ಉದ್ಯೋಗ

ಮಲ್ಲಿಗೆ ಕೃಷಿ ಅಗತ್ಯವಿರುವ ಸೌಕರ್ಯ ಸಿಗುತ್ತಿಲ್ಲ ಎಂಬ ಕೂಗಿನ ನಡುವೆ ಈ ಬೆಳೆ ಹೂವಿನ ಹಡಗಲಿಯಲ್ಲಿ ಮಹಿಳೆಯರ ಸಬಲೀಕರಣಕ್ಕೂ ಕಾರಣವಾಗಿದೆ ಎಂಬ ಅಂಶವನ್ನು ನಾವು ಅಲ್ಲಗಳೆಯುವಂತಿಲ್ಲ. ಉತ್ತರ ಕರ್ನಾಟಕದ ಬೇರೆ ಜಿಲ್ಲೆಗಳು ಅಥವಾ ತಾಲೂಕುಗಳಿಗೆ ಹೋಲಿಸಿದರೆ ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಹೂವಿನ ಹಡಗಲಿಯಲ್ಲಿಲ್ಲ. ಇಲ್ಲಿ ಮಹಿಳೆಯರು ತಮ್ಮ ಸ್ವಂತ ಊರಿನಲ್ಲೇ ಸ್ವ ಉದ್ಯೋಗ ಕಂಡುಕೊಂಡು ಬದುಕು ಸಾಗಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಹೂವಿನ ಹಡಗಲಿ ತಾಲೂಕಿನ ಮಲ್ಲಿಗೆ ಬೆಳೆಗಾರರಾದ ಗಂಗಮ್ಮ ಮಾತನಾಡಿದ್ದು, “ಕಾರ್ಮಿಕರ ಸಮಸ್ಯೆ ಇದ್ದರೂ, ಈ ಕೃಷಿಯು 8-10 ಹಳ್ಳಿಗಳ ನೂರಾರು ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ವಗ್ರಾಮದಲ್ಲೇ ದುಡಿಮೆಯ ಮೂಲವಾಗಿದೆ. ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಹೂವಿನ ಹಡಗಲಿ ಮಹಿಳೆಯರಿಗಿಲ್ಲ. ಹೂವು ಕೀಳುವುದು, ಹೂವು ಕಟ್ಟುವುದೇ ಮಹಿಳೆಯರಿಗ ಪೂರ್ಣ ಪ್ರಮಾಣದ ವೃತ್ತಿಯಾಗಿದೆ. ಅದೇ ಈಗ ಮಹಿಳೆಯರ ಸ್ವಾವಲಂಭಿ ಬದುಕಿಗೆ ದಾರಿ ದೀಪವಾಗಿದೆ. ಇನ್ನು ಮಲ್ಲಿಗೆ ಕೃಷಿ ಬೆಳೆಗಾರರು ಮಾತ್ರವಲ್ಲದೇ ಅದರ ಮಹಿಳಾ ಕಾರ್ಮಿಕರಿಗೂ ಜೀವನೋಪಾಯ ಕಾಯಕವಾಗಿದೆ. ಹೂವು ಕೀಳುವ, ಬಿಡಿಸುವ ಕಾರ್ಯಕ್ಕೆ ಮಹಿಳೆಯರೇ ಬೇಕು. ಅವರು ದಿನದಲ್ಲಿ ಆರು ತಾಸು ಕೆಲಸ ಮಾಡಿ ಸುಮಾರು 300ರೂ.ಗಳಷ್ಟು ಗಳಿಸುತ್ತಿದ್ದಾರೆ. ಆ ಮೂಲಕ ತಮ್ಮ ಸಂಸಾರಕ್ಕೆ ಹೆಗಲು ಕೊಟ್ಟಿದ್ದಾರೆ” ಎಂದು ತಿಳಿಸಿದರು.

ಕೃಷಿ ಪ್ರಧಾನವಾದ ಹೂವಿನ ಹಡಗಲಿ ತಾಲ್ಲೂಕಿನಲ್ಲಿ ವರ್ಷದ ಐದು ತಿಂಗಳುಗಳ ಕಾಲ ಇತರ ಕೂಲಿ ಕೆಲಸಗಳು ಕ್ಷೀಣಿಸಿರುತ್ತವೆ. ಇಂತಹ ಸಂಕಷ್ಟದ ಸಮಯದಲ್ಲಿ ಸ್ಥಳೀಯ ಕೂಲಿ ಕಾರ್ಮಿಕ ಮಹಿಳೆಯರ ಕೈ ಹಿಡಿದು ಆರ್ಥಿಕ ಆಸರೆಯಾಗಿ ನಿಂತಿರುವುದು ಇಲ್ಲಿನ ಹೆಮ್ಮೆಯ 'ಮಲ್ಲಿಗೆ ಕೃಷಿ'. ಈ ಬಗ್ಗೆ ಹೂವಿನ ಹಡಗಲಿಯ ಹೂವಿನ ಬೆಳೆಗಾರರ ಸಂಘದ ಖಜಾಂಚಿ ಕೆ.ಎಂ ಶಿವಪ್ರಕಾಶ ಹನಕನಹಳ್ಳಿ ಮಾತನಾಡಿದ್ದು, ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಲ್ಲಿಗೆ ಬಿಡಿಸುವ ಕೆಲಸದಲ್ಲಿ ನಿರತರಾಗುವ ಮಹಿಳೆಯರು, ಸರಾಸರಿ 3 ರಿಂದ 4 ಕೆಜಿ ಹೂವು ಬಿಡಿಸುತ್ತಾರೆ. ಒಂದು ಕೆಜಿ ಹೂವು ಬಿಡಿಸಿದರೆ 100 ರೂ. ಕೂಲಿ ಸಿಗುವುದರಿಂದ ದಿನಕ್ಕೆ 300-400 ರೂ. ವರೆಗೆ ಆದಾಯ ಗಳಿಸುತ್ತಾರೆ. ಕೇವಲ ಹೂವು ಬಿಡಿಸುವುದು ಮಾತ್ರವಲ್ಲದೆ, ಒಂದು ಕೆಜಿ ಹೂವು ಕಟ್ಟಿದರೆ 60 ರೂ. ಹಾಗೂ ವಿಶೇಷವಾಗಿ ಮೊಗ್ಗಿನ ಜಡೆ ಹೆಣೆದರೆ 150 ರಿಂದ 300 ರೂ.ವರೆಗೆ ಸಂಭಾವನೆ ದೊರೆಯುತ್ತದೆ. ಈ ಭಾಗದ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ ಹಾಗೂ ಸ್ವಸಹಾಯ ಸಂಘಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಂಪೂರ್ಣವಾಗಿ ಈ ಮಲ್ಲಿಗೆ ಬೆಳೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ಮಲ್ಲಿಗೆಯು ಕೇವಲ ಸುಗಂಧ ನೀಡುವ ಹೂವಾಗಿರದೆ, ಸಾವಿರಾರು ಮಹಿಳೆಯರ ಆರ್ಥಿಕ ಸಬಲೀಕರಣದ ಭರವಸೆಯಾಗಿದೆ ಎಂದು ತಿಳಿಸಿದ್ದಾರೆ.

ಅಳಿವಿನ ಅಂಚಿನಲ್ಲಿದೆಯೇ ಮೈಸೂರು ಮಲ್ಲಿಗೆ?

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂದ ಕೂಡಲೇ ನೆನಪಾಗುವುದು ಅರಮನೆ, ದಸರಾ ಮತ್ತು ಮನಸೂರೆಗೊಳ್ಳುವ ಮೈಸೂರು ಮಲ್ಲಿಗೆ. ತನ್ನ ವಿಶಿಷ್ಟ ಸುಗಂಧ ಹಾಗೂ ಅಂದದಿಂದಾಗಿ ಜಗತ್ಪ್ರಸಿದ್ಧವಾಗಿರುವ ಈ ಮಲ್ಲಿಗೆಗೂ 2006ರಲ್ಲಿ ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆ ದೊರೆತಿದೆ. ಆದರೆ, ಇಂದು ಈ ಪರಂಪರೆಯ ಬೆಳೆ ನಗರೀಕರಣ ಮತ್ತು ಹವಾಮಾನ ವೈಪರಿತ್ಯದ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ.

ಈ ಬಗ್ಗೆ ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರಿನ ಐಸಿಎಆರ್‌ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ತಜ್ಞರಾದ ಡಾ. ಬಿ.ಎನ್‌. ಜ್ಞಾನೇಶ್‌ ಅವರು ʻದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ್ದಾರೆ. “ಮೈಸೂರು ಮಲ್ಲಿಗೆಯ ಪರಿಮಳಕ್ಕೆ ಅಲ್ಲಿನ ಮಣ್ಣಿನ ಗುಣವೇ ಮುಖ್ಯ ಕಾರಣ. ನೀರು ಸರಾಗವಾಗಿ ಬಸಿದು ಹೋಗುವ ಫಲವತ್ತಾದ ಕೆಂಪು ಗೋರು ಮಣ್ಣು ಈ ಬೆಳೆಗೆ ಅತ್ಯಗತ್ಯ. 27 ರಿಂದ 32 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮಾತ್ರ ಈ ಹೂವು ಸಮೃದ್ಧವಾಗಿ ಅರಳುತ್ತದೆ. ಹವಾಮಾನದಲ್ಲಿ ಸ್ವಲ್ಪ ಏರುಪೇರಾದರೂ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ” ಎಂದಿದ್ದಾರೆ.

ಇತಿಹಾಸ ಮತ್ತು ಸಾಂಸ್ಕೃತಿಕ ನಂಟು

ಇನ್ನು ಡಾ.ಜ್ಞಾನೇಶ್‌ ಹೇಳುವಂತೆ ಯದುವಂಶದ ರಾಜರ ಆಳ್ವಿಕೆಯ ಕಾಲದಿಂದಲೂ ಮೈಸೂರು ಮಲ್ಲಿಗೆಗೆ ರಾಜಮರ್ಯಾದೆ ಇದೆ. ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ನಿತ್ಯ ಅಲಂಕಾರಕ್ಕೆ ಈ ಮಲ್ಲಿಗೆಯಿರಲೇಬೇಕು. ಕೇವಲ ದೈವಿಕ ಕಾರ್ಯಕ್ಕಷ್ಟೇ ಅಲ್ಲದೆ, ಇದರ ಅದ್ಭುತ ಸುಗಂಧದಿಂದಾಗಿ 'ಜಾಸ್ಮಿನ್ ಸೆಂಟ್' (ಪರ್ಫ್ಯೂಮ್) ತಯಾರಿಕೆಯಲ್ಲಿಯೂ ಇದಕ್ಕೆ ಭಾರಿ ಬೇಡಿಕೆಯಿದೆ.

ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು

ಒಂದು ಕಾಲದಲ್ಲಿ ಮೈಸೂರಿನ ಮನೆಗಳ ಹಿತ್ತಲಲ್ಲಿ ಮತ್ತು ಹೊಲಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಈ ಮಲ್ಲಿಗೆ, ಇಂದು ಶೇ. 50 ರಷ್ಟು ಕುಸಿದಿದೆ. ಇದಕ್ಕೆ ಮುಖ್ಯ ಕಾರಣಗಳ ಬಗ್ಗೆ ವಿವರಿಸಿದ ಜ್ಞಾನೇಶ್‌, “ಈ ಹಿಂದೆ ಅತಿ ಹೆಚ್ಚು ಮಲ್ಲಿಗೆ ಬೆಳೆಯುತ್ತಿದ್ದ ಇಳವಾಳ ಮತ್ತು ಶ್ರೀರಂಗಪಟ್ಟಣದ ಜಮೀನುಗಳು ಇಂದು ವಸತಿ ಸೈಟ್‌ಗಳಾಗಿ ಪರಿವರ್ತನೆಗೊಂಡಿವೆ. ಮತ್ತೊಂದೆಡೆ, ತಮಿಳುನಾಡಿನ 'ಗುಂಡು ಮಲ್ಲಿಗೆ' ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿದೆ. ತಮಿಳುನಾಡು ಮಲ್ಲಿಗೆಯನ್ನು ಹೆಚ್ಚು ದಿನ ಸಂಗ್ರಹಿಸಿಡಬಹುದು ಮತ್ತು ಬೆಲೆಯೂ ಅಗ್ಗ. ಆದರೆ ಮೈಸೂರು ಮಲ್ಲಿಗೆ ಬೇಗ ಬಾಡುವುದರಿಂದ ಶೇಖರಣೆ ಕಷ್ಟ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದು ಸಂಪೂರ್ಣ ಕಾರ್ಮಿಕ ಆಧಾರಿತ ಬೆಳೆ. ಕೀಟಬಾಧೆ ಹೆಚ್ಚು ಮತ್ತು ನಿರ್ವಹಣೆ ದುಬಾರಿ. ಅಲ್ಲದೆ, ಕೇವಲ ಮಾರ್ಚ್‌ನಿಂದ ಜುಲೈವರೆಗೆ ಮಾತ್ರ ಪೀಕ್ ಸೀಸನ್ ಆಗಿರುವುದರಿಂದ ರೈತರಿಗೆ ವರ್ಷಪೂರ್ತಿ ಆದಾಯ ಇರುವುದಿಲ್ಲ. ಅಲ್ಲದೇ ಜಿಐ(GIT) ಬೆಳೆಗಳಾದ ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆಗೆ ಸಿಗುವಂತಹ ಪ್ರೋತ್ಸಾಹ ಮಲ್ಲಿಗೆ ಬೆಳೆಗಾರರಿಗೆ ಸಿಗುತ್ತಿಲ್ಲ ಎಂಬ ಬೇಸರ ರೈತರಲ್ಲಿದೆ. ಜಿ.ಐ. ಟ್ಯಾಗ್ ದೊರೆತ ನಂತರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದ್ದರೂ, ಮಾರುಕಟ್ಟೆ ವ್ಯವಸ್ಥೆ ಇನ್ನೂ ಹಳ್ಳ ಹಿಡಿದಿದೆ. ಮೈಸೂರು ಮಲ್ಲಿಗೆಯ ನಕಲಿ ಉತ್ಪನ್ನಗಳನ್ನು ತಡೆಗಟ್ಟಲು ಮತ್ತು ರೈತರಿಗೆ ಸರಿಯಾದ ಬೆಲೆ ಸಿಗುವಂತಾಗಲು ಸಂಘಟಿತ ಮಾರುಕಟ್ಟೆಯ ಅಗತ್ಯವಿದೆ. ರೈತರಿಗೆ 'ಸರ್ಟಿಫೈಡ್ ಗ್ರೋವರ್' ಎಂಬ ಮಾನ್ಯತೆ ನೀಡಿದರೆ ರೈತರು ಈ ಬೆಳೆಯತ್ತ ಮುಖ ಮಾಡಲು ಸಾಧ್ಯ ಎಂಬುದು ಜ್ಞಾನೇಶ್‌ ಅಭಿಪ್ರಾಯ

ಮಲ್ಲಿಗೆ ಕೃಷಿಕರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು

ಪ್ರಸ್ತುತ ಮೈಸೂರಿನಲ್ಲಿ ಕೇವಲ 15-20 ರೈತರು ಮಾತ್ರ ಈ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಇದರಲ್ಲಿ ಅರ್ಧದಷ್ಟು ಮಹಿಳೆಯರೇ ಇರುವುದು ವಿಶೇಷ. ಹಿಂದೆಲ್ಲ ಮುಂಜಾನೆ ಹೂವು ಬಿಡಿಸುವುದರಿಂದ ಹಿಡಿದು, ಅದನ್ನು ಮಾರುಕಟ್ಟೆಗೆ ಸಿದ್ಧಪಡಿಸುವವರೆಗೆ ಮಹಿಳೆಯರ ಪಾತ್ರ ದೊಡ್ಡದು. ಮನೆಯ ಕೆಲಸಗಳ ನಡುವೆಯೂ ಮಹಿಳೆಯರು ತಮ್ಮ ಹಿತ್ತಲಿನಲ್ಲಿ ಅಥವಾ ಸಣ್ಣ ಜಮೀನಿನಲ್ಲಿ ಮಲ್ಲಿಗೆ ಬೆಳೆಯುವ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದರು. ಇದು ಅವರ ಸ್ವಾವಲಂಭಿ ಬದುಕಿಗೆ ಆಸರೆಯಾಗಿತ್ತು. ಆದರೆ ಇಂದು ಮಲ್ಲಿಗೆ ಕೃಷಿ ಸಂಪೂರ್ಣವಾಗಿ ಅಳಿವಿನಂಚಿನಲ್ಲಿದೆ. ಹೀಗಾಗಿ ಈಗ ಈ ಬೆಳೆಯ ಇಳುವರಿ ಹೆಚ್ಚಿಸಲು ರೈತರನ್ನು ಭೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರಂಭವಾಗಿವೆ ಎಂದು ತಿಳಿಸಿದ್ದಾರೆ ಡಾ.ಜ್ಞಾನೇಶ್‌.

ಕರಾವಳಿಯ ಹೆಮ್ಮೆ ಶಂಕರಪುರ ಮಲ್ಲಿಗೆ

ಕರ್ನಾಟಕದ ಮಲ್ಲಿಗೆಗಳಲ್ಲಿ ಮೈಸೂರು ಮಲ್ಲಿಗೆಯಷ್ಟೇ ಖ್ಯಾತಿ ಪಡೆದಿರುವುದು ಉಡುಪಿಯ ಶಂಕರಪುರ ಮಲ್ಲಿಗೆ. ಇದು ಕೇವಲ ಒಂದು ಹೂವಲ್ಲ, ಕರಾವಳಿ ಜನರ ಭಾವನೆ ಮತ್ತು ಆರ್ಥಿಕತೆಯ ಬೆನ್ನೆಲುಬು. 2008ರಲ್ಲಿ ಭೌಗೋಳಿಕ ಸೂಚ್ಯಂಕ (GI Tag) ಪಡೆದ ಈ ಮಲ್ಲಿಗೆ ತನ್ನದೇ ಆದ ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಆಧುನಿಕ ಯುಗದಲ್ಲೂ ಕರಾವಳಿ ಭಾಗದಲ್ಲಿ ಮಲ್ಲಿಗೆ ಕೃಷಿಯನ್ನೇ ಆಧರಿಸಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳು ಬಹಳಷ್ಟಿವೆ.

ಈ ಬಗ್ಗೆ ಶಂಕರಾಪುರದ ಮಲ್ಲಿಗೆ ಬೆಳೆಗಾರರಾದ ಜಾನ್‌ ಡಿಸೋಜಾ ದ ಫಡರಲ್‌ ಕರ್ನಾಟಕದ ಜೊತೆ ಮಾತನಾಡಿದ್ದು, “ಶಂಕರಪುರ ಮಲ್ಲಿಗೆಯು ಸೂರ್ಯನ ಶಾಖಕ್ಕೆ ಹೆಚ್ಚು ಸ್ಪಂದಿಸುವ ಬೆಳೆ. ಬೇಸಿಗೆಯ ಸೆಖೆಯ ಸಮಯದಲ್ಲಿ ಇದರ ಉತ್ಪಾದನೆ ಗರಿಷ್ಠ ಮಟ್ಟದಲ್ಲಿರುತ್ತದೆ. ಗಿಡಗಳು ಸದೃಢವಾಗಿದ್ದರೆ ಮತ್ತು ಸರಿಯಾದ ಪೋಷಣೆ ನೀಡಿದರೆ ವರ್ಷಪೂರ್ತಿ ಫಸಲು ಪಡೆಯಲು ಸಾಧ್ಯವಿದೆ. ಅತಿಯಾದ ಚಳಿ ಮತ್ತು ಮಳೆಯ ಸಮಯದಲ್ಲಿ ಹೂವಿನ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ” ಎಂದಿದ್ದಾರೆ.

ಮಾರುಕಟ್ಟೆ ಮತ್ತು ದರ ನಿರ್ಧಾರ: ಒಂದು ವಿಶಿಷ್ಟ ವ್ಯವಸ್ಥೆ

ಶಂಕರಪುರ ಮಲ್ಲಿಗೆಯ ಮಾರುಕಟ್ಟೆ ವ್ಯವಸ್ಥೆ ಅತ್ಯಂತ ವಿಶಿಷ್ಟವಾಗಿದೆ. ಇದು ಇಲ್ಲಿಯವರೆಗೆ ಸರ್ಕಾರದ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಬೆಳೆಗಾರರು ತಾವು ಬೆಳೆದ ಹೂವನ್ನು ಏಜೆಂಟ್‌ಗಳ ಮೂಲಕ 'ಶಂಕರಪುರ ಕಟ್ಟೆ'ಗೆ ತಲುಪಿಸುತ್ತಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಜಾನ್‌ ಡಿಸೋಜಾ ಅವರು,” ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿ 'ಕಟ್ಟೆ ಮುಖ್ಯಸ್ಥರು' ಪ್ರತಿದಿನ ಬೆಲೆ ನಿಗದಿಪಡಿಸುತ್ತಾರೆ. ವಿಶೇಷವೆಂದರೆ, ಬೆಲೆ ನಿರ್ಧರಿಸುವವರೂ ಬೆಳೆಗಾರರೇ ಆಗಿರುವುದರಿಂದ ರೈತರ ಹಿತಾಸಕ್ತಿಗೆ ಪೂರಕವಾಗಿಯೇ ದರ ನಿರ್ಧಾರವಾಗುತ್ತದೆ. ಬೇಡಿಕೆ ಹೆಚ್ಚಿದ್ದಾಗ ಒಂದು 'ಅಟ್ಟಿ' (ಹೂವಿನ ಅಳತೆ) ಹೂವಿಗೆ ಸುಮಾರು 2,200 ರೂ.ಗಳವರೆಗೆ ಗರಿಷ್ಠ ಬೆಲೆ ಸಿಗುತ್ತದೆ” ಎಂದಿದ್ದಾರೆ.

ಶಂಕರಪುರ ಮಲ್ಲಿಗೆಯನ್ನು ಕಟ್ಟುವುದು ಮತ್ತು ಪ್ಯಾಕ್ ಮಾಡುವ ವಿಧಾನ ಸಂಪೂರ್ಣ ಪರಿಸರ ಪೂರಕವಾಗಿದೆ. ಹೂವುಗಳನ್ನು ಕಟ್ಟಲು ಯಾವುದೇ ಪ್ಲಾಸ್ಟಿಕ್ ಅಥವಾ ಕೃತಕ ದಾರ ಬಳಸುವುದಿಲ್ಲ, ಬದಲಿಗೆ ನೈಸರ್ಗಿಕ ಬಾಳೆ ದಿಂಡಿನ ನೂಲನ್ನು ಬಳಸಲಾಗುತ್ತದೆ. ಇನ್ನು ಪ್ಯಾಕಿಂಗ್‌ಗಾಗಿ ಪ್ಲಾಸ್ಟಿಕ್ ಚೀಲಗಳ ಬದಲು ಬಾಳೆ ಎಲೆಗಳನ್ನು ಬಳಸಲಾಗುತ್ತದೆ. ಇದು ಹೂವಿನ ತಾಜಾತನವನ್ನು ಕಾಪಾಡುವುದಲ್ಲದೆ ಪರಿಸರವನ್ನೂ ರಕ್ಷಿಸುತ್ತದೆ.

“ಮೈಸೂರು ಮಲ್ಲಿಗೆಯನ್ನು ಸುಗಂಧ ದ್ರವ್ಯ (Scent) ತಯಾರಿಕೆಗೆ ಬಳಸಿದರೆ, ಶಂಕರಪುರ ಮಲ್ಲಿಗೆಯನ್ನು ಕೇವಲ ಅಲಂಕಾರಿಕ ಮತ್ತು ಶುಭ ಸಮಾರಂಭಗಳಿಗೆ ಮಾತ್ರ ಬಳಸಲಾಗುತ್ತದೆ. ಇದರ ಸೆಂಟ್ ತಯಾರಿಕೆಯ ಬಗ್ಗೆ ಇದುವರೆಗೆ ಯಾವುದೇ ಪ್ರಾಯೋಗಿಕ ಪ್ರಯತ್ನಗಳು ನಡೆದಿಲ್ಲ. ಈ ಮಲ್ಲಿಗೆಗೆ ಕೇವಲ ಸ್ಥಳೀಯವಾಗಿ ಮಾತ್ರವಲ್ಲದೆ, ಹೊರರಾಜ್ಯಗಳಲ್ಲಿಯೂ ಭಾರಿ ಬೇಡಿಕೆಯಿದೆ. ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕರಾವಳಿ ಜನರು ತಮ್ಮ ಸಮಾರಂಭಗಳಿಗೆ ಶಂಕರಪುರ ಮಲ್ಲಿಗೆಯನ್ನೇ ಬಯಸುತ್ತಾರೆ. ಹೀಗಾಗಿ ಇದರ ರಫ್ತು ವ್ಯವಹಾರವೂ ಚುರುಕಾಗಿ ನಡೆಯುತ್ತದೆ” ಎಂಬುದು ಜಾನ್‌ ಡಿಸೋಜಾ ಅವರು ಅಭಿಪ್ರಾಯ.

ಮಲ್ಲಿಗೆಯಿಂದಲೇ ಮಕ್ಕಳ ಉಜ್ವಲ ಭವಿಷ್ಯ

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ಉಡುಪಿ ಭಾಗದಲ್ಲಿ ಮಲ್ಲಿಗೆ ಕೃಷಿಯೇ ಹಲವು ಕುಟುಂಬಗಳಿಗೆ ಜೀವನಾಧಾರವಾಗಿದೆ. ಈ ಭಾಗದ ಮಹಿಳೆಯರಂತೂ ಮಲ್ಲಿಗೆ ಕೃಷಿಯನ್ನೇ ತಮ್ಮ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ಮಲ್ಲಿಗೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಗ್ರೇಸಿ ಮಾತೈಸ್, 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡುತ್ತಾ ತಮ್ಮ ಯಶಸ್ಸಿನ ಹಾದಿಯನ್ನು ಮೆಲುಕು ಹಾಕಿದ್ದಾರೆ.

"ನಾವು ಕಳೆದ 35 ವರ್ಷಗಳಿಂದ ಮಲ್ಲಿಗೆ ಕೃಷಿ ಮಾಡುತ್ತಿದ್ದೇವೆ. ಕೇವಲ 10 ಸೆಂಟ್ಸ್ ಜಾಗದಲ್ಲಿ ಆರಂಭವಾದ ಈ ಕೃಷಿ ಇಂದು ನಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದೆ. ಇದೇ ಮಲ್ಲಿಗೆಯನ್ನು ಮಾರಿ ಬಂದ ಹಣದಿಂದಲೇ ನನ್ನ ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿ, ಇಂದು ಅವರು ವಿದೇಶದಲ್ಲಿ ನೆಲೆಸುವಂತೆ ಮಾಡಿದ್ದೇನೆ. ಈ ಹೂವು ನಮ್ಮ ಬದುಕನ್ನೇ ಕಟ್ಟಿಕೊಟ್ಟಿದೆ” ಎಂದಿದ್ದಾರೆ.

ಒಂದು ಕಾಲದಲ್ಲಿ ಹತ್ತಾರು ಅಟ್ಟಿಗಳಷ್ಟು ಮಲ್ಲಿಗೆಯನ್ನು ಬೆಳೆಯುತ್ತಿದ್ದ ಗ್ರೇಸಿ ಅವರು, ಇಂದು ವಯೋಸಹಜ ಕಾರಣಗಳಿಂದ ಕೃಷಿಯ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಹಿಂದೆ ದಿನಕ್ಕೆ 5 ರಿಂದ 10 ಅಟ್ಟಿಗಳಷ್ಟು ಮಲ್ಲಿಗೆ ಬೆಳೆದು ಮಾರುಕಟ್ಟೆಗೆ ಕಳುಹಿಸಿ ಅದರಿಂದ ವಾರಕ್ಕೆ ಸುಮಾರು 15 ಸಾವಿರದವರೆಗೆ ಆದಾಯ ಗಳಿಸುತ್ತಿದ್ದರಂತೆ.

ಈಗ ವಯಸ್ಸಾಗಿರುವುದರಿಂದ ಹೂವು ಬಿಡಿಸುವುದು ಮತ್ತು ಅದನ್ನು ಕಟ್ಟುವುದು ಸ್ವಲ್ಪ ಕಷ್ಟದ ಕೆಲಸ. ಆದರೂ, ಶ್ರಮಜೀವಿಯಾಗಿರುವ ಅವರು ಈಗಲೂ ದಿನಕ್ಕೆ 1-2 ಅಟ್ಟಿ ಹೂವು ಬೆಳೆಯುತ್ತಿದ್ದಾರೆ. ಪ್ರಸ್ತುತ ಮಲ್ಲಿಗೆಯಿಂದ ವಾರಕ್ಕೆ ಸರಾಸರಿ 4 ರಿಂದ 5 ಸಾವಿರ ರೂಪಾಯಿಗಳನ್ನು ಗಳಿಸುತ್ತಾ, ತಮ್ಮ ಇಳಿ ವಯಸ್ಸಿನಲ್ಲೂ ಯಾರಿಗೂ ಹೊರೆಯಾಗದೆ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಮಲ್ಲಿಗೆ ಕೇವಲ ಒಂದು ಹೂವಲ್ಲ, ಅದು ರೈತನ ಬೆವರಿನ ಹನಿಗಳಿಗೆ ಸಿಕ್ಕ ಪ್ರತಿಫಲ, ಮಹಿಳೆಯರ ಸ್ವಾಭಿಮಾನದ ಸಂಕೇತ ಮತ್ತು ಕರ್ನಾಟಕದ ಮಣ್ಣಿನ ಘಮಲನ್ನು ಜಗತ್ತಿಗೆ ಸಾರುವ ರಾಯಭಾರಿ. ಜಿಐ ಟ್ಯಾಗ್ (GI Tag) ಎಂಬ ಹೆಮ್ಮೆಯ ಗರಿ ಈ ತಳಿಗಳಿಗಿದ್ದರೂ, ಮಾರುಕಟ್ಟೆಯ ಕೊರತೆ, ಹವಾಮಾನ ವೈಪರಿತ್ಯ ಮತ್ತು ಶೈತ್ಯಾಗಾರಗಳ ಅಭಾವದಂತಹ ಸವಾಲುಗಳು ಈ ಸುವಾಸಿತ ಕೃಷಿಯನ್ನು ಅಳಿವಿನಂಚಿಗೆ ತಳ್ಳುತ್ತಿವೆ.

ಈ ಭೌಗೋಳಿಕ ಮಾನ್ಯತೆ ಪಡೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೆ, ಮಲ್ಲಿಗೆ ಕೇವಲ ದೇವರಿಗೆ ಅರ್ಪಿಸುವ ಹೂವಾಗಿ ಉಳಿಯದೆ ಕರ್ನಾಟಕದ ಆರ್ಥಿಕತೆಯ 'ಬಿಳಿ ಚಿನ್ನ'ವಾಗಿ ಹೊಳೆಯಲಿದೆ.

Read More
Next Story