ಭಾರತಕ್ಕೆ ಮರಳಿದ ಐಕಾನಿಕ್ ಟೆನ್10: ಸರ್ವೊ ಹೈಪರ್ ಸ್ಪೋರ್ಟ್ ರೇಸಿಂಗ್ ತಂಡದಲ್ಲಿ ರಾಜೀವ್ ಸೇತು
x

ದಾಖಲೆ ವೀರ ರಾಜೀವ್ ಸೇತು 

ಭಾರತಕ್ಕೆ ಮರಳಿದ ಐಕಾನಿಕ್ ಟೆನ್10: 'ಸರ್ವೊ ಹೈಪರ್ ಸ್ಪೋರ್ಟ್ ರೇಸಿಂಗ್' ತಂಡದಲ್ಲಿ ರಾಜೀವ್ ಸೇತು

ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರಸಿದ್ಧ ಟೆನ್10 ರೇಸಿಂಗ್, ಇದೀಗ 'ಸರ್ವೊ ಹೈಪರ್ ಸ್ಪೋರ್ಟ್ ರೇಸಿಂಗ್' ಹೆಸರಿನಲ್ಲಿ ಅಂತಾರಾಷ್ಟ್ರೀಯ ಗ್ರಿಡ್‌ಗೆ ಮರಳಿದೆ.


Click the Play button to hear this message in audio format

ಭಾರತದ ಪ್ರಮುಖ ಮೋಟಾರ್ ರೇಸಿಂಗ್ ತಂಡಗಳಲ್ಲಿ ಒಂದಾದ 'ಟೆನ್10', ಅಂತಾರಾಷ್ಟ್ರೀಯ ರೇಸಿಂಗ್ ಕಣಕ್ಕೆ ಮರಳಲು ಸಜ್ಜಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಲೂಬ್ರಿಕೆಂಟ್ ಬ್ರ್ಯಾಂಡ್ 'ಸರ್ವೊ' ಜೊತೆಗಿನ ಒಪ್ಪಂದದೊಂದಿಗೆ, 'ಸರ್ವೊ ಹೈಪರ್ ಸ್ಪೋರ್ಟ್ ರೇಸಿಂಗ್' ಎಂಬ ಹೊಸ ಹೆಸರಿನಲ್ಲಿ ತಂಡವು ಎಫ್‌ಐಎಂ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (ಎಆರ್‌ಆರ್‌ಸಿ) ಪಾಲ್ಗೊಳ್ಳಲಿದೆ.

2026ನೇ ಸಾಲಿನ ಪೂರ್ಣ ಋತುವಿಗಾಗಿ ಏಷ್ಯಾ ಪ್ರೊಡಕ್ಷನ್ 250 ಸಿಸಿ (ಎಪಿ 250) ವಿಭಾಗದಲ್ಲಿ ತಂಡವು ಸ್ಪರ್ಧಿಸಲಿದ್ದು, ಸ್ಪರ್ಧಾತ್ಮಕ ಮೋಟಾರ್ ಸ್ಪೋರ್ಟ್ಸ್ ವಲಯದಲ್ಲಿ ಕುತೂಹಲ ಮೂಡಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ಕಠಿಣ ಪೈಪೋಟಿಯನ್ನು ಎದುರಿಸಲು ತಂಡವು ಅನುಭವ ಹಾಗೂ ಯುವ ಪ್ರತಿಭೆಯ ಸಂಯೋಜನೆಗೆ ಮಣೆಹಾಕಿದೆ. ಭಾರತದ ಅನುಭವಿ ರೇಸರ್ ರಾಜೀವ್ ಸೇತು ಹಾಗೂ ಜಪಾನ್‌ನ 17 ವರ್ಷದ ಯುವ ರೈಡರ್ ರೈಕು ಹಸೆಗಾವಾ ಅವರನ್ನು ತಂಡಕ್ಕೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.

ಉದಯೋನ್ಮುಖ ರೈಡರ್ ರೈಕು ಹಸೆಗಾವಾ

ರಾಜೀವ್ ಸೇತು ಅವರ ಸುದೀರ್ಘ ಟ್ರ್ಯಾಕ್ ಅನುಭವ ಹಾಗೂ ಜಪಾನ್‌ನ ಕಠಿಣ ರೇಸಿಂಗ್ ಶಿಸ್ತಿನಲ್ಲಿ ಪಳಗಿರುವ ರೈಕು ಹಸೆಗಾವಾ ಅವರ ತಾಂತ್ರಿಕ ಕೌಶಲ್ಯವು, ಎಪಿ 250 ವಿಭಾಗದಲ್ಲಿ ತಂಡಕ್ಕೆ ಉತ್ತಮ ವೇಗ ತಂದುಕೊಡುವ ನಿರೀಕ್ಷೆಯಿದೆ. ಈ ಮೂಲಕ ಏಷ್ಯಾದ ಪ್ರತಿಷ್ಠಿತ ರೇಸಿಂಗ್ ವೇದಿಕೆಯಲ್ಲಿ ಪ್ರಬಲ ಪೈಪೋಟಿ ನೀಡಲು ತಂಡವು ವೃತ್ತಿಪರ ಕಾರ್ಯತಂತ್ರ ರೂಪಿಸಿದೆ.

ತಾಂತ್ರಿಕ ವಿಶ್ವಾಸಾರ್ಹತೆ ಮತ್ತು ಗುರಿ

ಟೆನ್10 ತಂಡದ ರೇಸಿಂಗ್ ಪರಂಪರೆ ಹಾಗೂ ಸರ್ವೊದ ಆಧುನಿಕ ಲೂಬ್ರಿಕೆಂಟ್ ತಂತ್ರಜ್ಞಾನವನ್ನು ಮೇಳೈಸಿ, ಟ್ರ್ಯಾಕ್‌ನಲ್ಲಿ ವಾಹನಗಳ ಕಾರ್ಯಕ್ಷಮತೆ ಹೆಚ್ಚಿಸುವ ಪ್ರಾಯೋಗಿಕ ಗುರಿಯನ್ನು ತಂಡ ಹೊಂದಿದೆ. ಏಷ್ಯಾದ ಅತ್ಯಂತ ಸವಾಲಿನ ಸರ್ಕ್ಯೂಟ್‌ಗಳಲ್ಲಿ ವಾಹನಗಳ ಎಂಜಿನಿಯರಿಂಗ್ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಲು ಈ ಸಹಭಾಗಿತ್ವ ನೆರವಾಗಲಿದೆ ಎಂದು ತಂಡದ ನಿರ್ದೇಶಕ ಗಣೇಶ್ ಅನಂತ್ ವಿಶ್ಲೇಷಿಸಿದ್ದಾರೆ. ಇದು ಕೇವಲ ರೇಸಿಂಗ್ ಕಣಕ್ಕೆ ತಂಡದ ಪುನರಾಗಮನವಲ್ಲ, ಬದಲಾಗಿ ಮೋಟಾರ್ ಸ್ಪೋರ್ಟ್ಸ್ ವಲಯದಲ್ಲಿ ಭಾರತದ ತಾಂತ್ರಿಕ ವಿಕಸನವಾಗಿದೆ ಎಂಬುದು ತಂಡದ ಆಡಳಿತ ಮಂಡಳಿಯ ನಿಲುವಾಗಿದೆ.

ವೇದಿಕೆ ಏರುವ ವೃತ್ತಿಪರ ಲೆಕ್ಕಾಚಾರ

ಅಂತಾರಾಷ್ಟ್ರೀಯ ರೇಸಿಂಗ್‌ನಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಗಂಭೀರವಾಗಿಸುವ ಹಾಗೂ ಸ್ಪರ್ಧಾತ್ಮಕವಾಗಿಸುವ ನಿಟ್ಟಿನಲ್ಲಿ ಈ ಬೆಳವಣಿಗೆಯನ್ನು ಗುರುತಿಸಲಾಗುತ್ತಿದೆ. ರೇಸ್ ಟ್ರ್ಯಾಕ್‌ನಲ್ಲಿ ಭಾರತೀಯ ಕೈಗಾರಿಕಾ ಗುಣಮಟ್ಟವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಟೆನ್10 ಸಂಸ್ಥಾಪಕ ರಾಮ್ಜಿ ಗೋವಿಂದರಾಜನ್ ಸ್ಪಷ್ಟಪಡಿಸಿದ್ದಾರೆ. ರಾಜೀವ್ ಅವರ ಅನುಭವದ ಕಮ್‌ಬ್ಯಾಕ್ ಹಾಗೂ ಹಸೆಗಾವಾ ಅವರ ಜಾಗತಿಕ ಗುಣಮಟ್ಟದ ಚಾಲನಾ ಶೈಲಿಯು, ಮುಂಬರುವ ಋತುವಿನಲ್ಲಿ ತಂಡವು ಚಾಂಪಿಯನ್‌ಶಿಪ್‌ ವೇದಿಕೆ ಏರಲು ಪೂರಕವಾದ ತಾಂತ್ರಿಕ ವಾತಾವರಣವನ್ನು ನಿರ್ಮಿಸಿದೆ.

Read More
Next Story