
ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ ವಿಶ್ವ ದಾಖಲೆ: 10 ಕೋಟಿ ಫಾಲೋವರ್ಸ್ ದಾಟಿದ ಮೊದಲ ಜಾಗತಿಕ ನಾಯಕ!
PM Modi| ಫೆಬ್ರವರಿ 26, 2026ರಂದು ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ಸ್ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ (10 ಕೋಟಿ) ಅನುಯಾಯಿಗಳನ್ನು ಹೊಂದುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಜಕೀಯ ನಾಯಕ ಮತ್ತು ಜಾಗತಿಕ ಮುಖಂಡ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ (ಫೆಬ್ರವರಿ 26) ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಅಪ್ರತಿಮ ಜನಪ್ರಿಯತೆ
2014 ರಲ್ಲಿ ಇನ್‌ಸ್ಟಾಗ್ರಾಮ್ ಸೇರಿದ ಪ್ರಧಾನಿ ಮೋದಿ, ಕಳೆದ ಒಂದು ದಶಕದಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ಡಿಜಿಟಲ್ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ದುಪ್ಪಟ್ಟು ಫಾಲೋವರ್ಸ್‌ಗಳನ್ನು ಮೋದಿ ಹೊಂದಿದ್ದಾರೆ ಎಂಬುದು ಗಮನಾರ್ಹ.
ವಿಶ್ವದ ಟಾಪ್ 5 ನಾಯಕರ ಪಟ್ಟಿ:
ನರೇಂದ್ರ ಮೋದಿ (ಭಾರತ)- 100 ಮಿಲಿಯನ್
ಡೊನಾಲ್ಡ್ ಟ್ರಂಪ್ (ಅಮೆರಿಕ)- 43.2 ಮಿಲಿಯನ್
ಪ್ರಬೊವೊ ಸುಬಿಯಾಂಟೊ (ಇಂಡೋನೇಷ್ಯಾ)- 15 ಮಿಲಿಯನ್
ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (ಬ್ರೆಜಿಲ್)- 14.4 ಮಿಲಿಯನ್
ರೆಸೆಪ್ ತಯ್ಯಿಪ್ ಎರ್ಡೋಗನ್ (ಟರ್ಕಿ)- 11.6 ಮಿಲಿಯನ್
ಮೋದಿಯವರ ನಂತರದ ಸ್ಥಾನದಲ್ಲಿರುವ ಐವರು ಪ್ರಮುಖ ವಿಶ್ವ ನಾಯಕರ ಒಟ್ಟು ಫಾಲೋವರ್ಸ್‌ಗಳನ್ನು ಸೇರಿಸಿದರೂ, ಅದು ಮೋದಿ ಒಬ್ಬರ ಸಂಖ್ಯೆಗಿಂತ ಕಡಿಮೆಯಿದೆ!
ಭಾರತೀಯ ರಾಜಕಾರಣಿಗಳಲ್ಲಿ ಮೋದಿಯೇ ಸುಪ್ರೀಂ
ಭಾರತದ ಆಂತರಿಕ ರಾಜಕೀಯ ವಲಯದಲ್ಲೂ ಮೋದಿಯವರ ಡಿಜಿಟಲ್ ಪ್ರಭಾವ ಅತಿ ದೊಡ್ಡದಾಗಿದೆ. ಇತರ ಪ್ರಮುಖ ನಾಯಕರಿಗಿಂತ ಅವರು ಬಹುದೂರದ ಅಂತರ ಕಾಯ್ದುಕೊಂಡಿದ್ದಾರೆ. ಉತ್ತರ ಪ್ರದೇಶ ಸಿಎಂ ಯೊಗಿ ಆದಿತ್ಯನಾಥ್ 1.6 ಕೋಟಿ (16.1ಮಿಲಿಯನ್) ಫಾಲೋವರ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 1.2 ಕೋಟಿ (12.6ಮಿಲಿಯನ್) ಅನುಯಾಯಿಗಳನ್ನು ಹೊಂದಿದ್ದಾರೆ.
ಯುವಜನತೆಯೊಂದಿಗೆ ಕನೆಕ್ಟ್
ಈ ಅಂಕಿ-ಅಂಶಗಳು ಪ್ರಧಾನಿ ಮೋದಿಯವರಿಗೆ ಜಾಗತಿಕ ಮಟ್ಟದಲ್ಲಿ, ವಿಶೇಷವಾಗಿ ಯುವಜನತೆಯಲ್ಲಿ ಇರುವ ಅಭೂತಪೂರ್ವ ಜನಪ್ರಿಯತೆಯನ್ನು ಸಾಬೀತುಪಡಿಸುತ್ತವೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

