Saalumarada Thimmakka| ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
x

Saalumarada Thimmakka| ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ

ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕ ಅವರು ಮರಗಿಡಗಳನ್ನೇ ಮಕ್ಕಳಂತೆ ಸಲಹಿ ವೃಕ್ಷಮಾತೆ ಎನಿಸಿಕೊಂಡರು. ರಸ್ತೆಯ ಬದಿಯಲ್ಲಿ ತಿಮ್ಮಕ್ಕ ನೆಟ್ಟಿರುವ ಸಾಲು ಮರಗಳ ತಂಗಾಳಿ ಈಗಲೂ ದಾರಿ ಹೋಕರ ಮೈಮನವನ್ನು ಆಹ್ಲಾದಗೊಳಿಸಲಿದೆ.


Click the Play button to hear this message in audio format

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ(114) ನಿಧನರಾಗಿದ್ದಾರೆ. ವಯೋ ಸಹಜ ಕಾರಣಗಳಿಂದ ಬಳಲುತ್ತಿದ್ದ ಅವರು ಶುಕ್ರವಾರ ಬೆಂಗಳೂರಿನ ಜಯನಗರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕ ಅವರು ಮರಗಿಡಗಳನ್ನೇ ಮಕ್ಕಳಂತೆ ಸಲಹಿ ವೃಕ್ಷಮಾತೆ ಎನಿಸಿಕೊಂಡಿದ್ದರು. ರಸ್ತೆಯ ಬದಿಯಲ್ಲಿ ತಿಮ್ಮಕ್ಕ ನೆಟ್ಟಿರುವ ಸಾಲು ಆಲದ ಮರಗಳು ಈಗಲೂ ದಾರಿ ಹೋಕರಿಗೆ ತಂಗಾಳಿ ಒದಗಿಸುತ್ತಿವೆ.

ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದರು.

ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ತಂದೆ ಚಿಕ್ಕರಂಗಯ್ಯ; ತಾಯಿ ವಿಜಯಮ್ಮ. ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನ ಕಾಯುವವರನ್ನು ಮದುವೆಯಾಗಿದ್ದು, ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದವರು. ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಡಲಾರಂಭಿಸಿದರು ಎಂದು ಹೇಳಲಾಗಿದೆ.

ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು. ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು.

ಇವರು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಗಂಡ-ಹೆಂಡಿರು ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಹಾಗೂ ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು. ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು.

ತಮ್ಮ ಈ ಅನುಪಮ ಪರಿಸರ ಸೇವೆಯನ್ನು ಗುರುತಿಸಿ ತಿಮ್ಮಕ್ಕನವರಿಗೆ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಸನ್ಮಾನಗಳನ್ನು ಪ್ರದಾನ ಮಾಡಲಾಗಿದೆ. ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ ಮತ್ತು 1997ರಲ್ಲಿ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಲಭಿಸಿವೆ. ಅದೇ ವರ್ಷ ಅವರಿಗೆ ವೀರಚಕ್ರ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರದಿಂದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮಾನ್ಯತಾ ಪ್ರಮಾಣ ಪತ್ರ, ಹಾಗೂ ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರಿನ ಶ್ಲಾಘನಾ ಪ್ರಮಾಣ ಪತ್ರವನ್ನು ಅವರು ಪಡೆದಿದ್ದಾರೆ.

2000ನೇ ಇಸವಿಯಲ್ಲಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ ಮತ್ತು 2006ರಲ್ಲಿ ಗಾಡ್ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಅವರಿಗೆ ಸಂದಿವೆ. ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ಪರಿಸರ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ಮತ್ತು ನ್ಯಾಷನಲ್ ಸಿಟಿಜನ್ ಪ್ರಶಸ್ತಿಗಳು ಸೇರಿವೆ.

ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ರಾಜ್ಯೋತ್ಸವ ಪ್ರಶಸ್ತಿಯೂ ಅವರಿಗೆ ಲಭಿಸಿದೆ. 2010ನೇ ಸಾಲಿನ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿಯನ್ನು ಹಂಪಿ ವಿಶ್ವವಿದ್ಯಾಲಯವು ತಿಮ್ಮಕ್ಕನವರಿಗೆ ನೀಡಿ ಗೌರವಿಸಿತು. 2015ರಲ್ಲಿ ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪುರಸ್ಕಾರ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಶಾಲಾಕ್ಷಿ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು 2019ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವರಿಗೆ ಪ್ರಕಟಿಸಲಾಯಿತು.2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ಸಹ ಲಭಿಸಿದೆ.

Read More
Next Story