
ನಕಲಿ ಬಿಕಿನಿ ವಿಡಿಯೋಗೆ ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ
Rukmini Vasanth| ರುಕ್ಮಿಣಿ ವಸಂತ್ ಡೀಪ್‌ಫೇಕ್ ಬಿಕಿನಿ ಫೋಟೋ ವೈರಲ್: ಕಾನೂನು ಕ್ರಮದ ಎಚ್ಚರಿಕೆ
ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ವೈರಲ್ ಆಗಿರುವ ನಕಲಿ ಬಿಕಿನಿ ವಿಡಿಯೋ ವಿರುದ್ಧ ನಟಿ ಆಕ್ರೋಶ ಹೊರಹಾಕಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ನಟಿ ರುಕ್ಮಿಣಿ ವಸಂತ್ ಅವರ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಡೀಪ್‌ಫೇಕ್ ಬಿಕಿನಿ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ಕುರಿತು ನಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಸಿರು ಬಣ್ಣದ ಬಿಕಿನಿ ಧರಿಸಿ ಮಹಿಳೆಯೊಬ್ಬರು ಈಜುಕೊಳಕ್ಕೆ ಇಳಿಯುತ್ತಿರುವ ವಿಡಿಯೋವೊಂದಕ್ಕೆ ನಟಿಯ ಮುಖವನ್ನು ದುರ್ಬಳಕೆ ಮಾಡಿಕೊಂಡು ಎಡಿಟ್ ಮಾಡಲಾಗಿತ್ತು. ಇದು ನಿಜವಾದ ವಿಡಿಯೋ ಎಂದೇ ನಂಬಿ ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಟಿ, ಸುಳ್ಳು ಸುದ್ದಿಗೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಪ್ರಕಟಣೆ ಹಂಚಿಕೊಂಡಿರುವ ರುಕ್ಮಿಣಿ ವಸಂತ್, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಬಿಕಿನಿ ಚಿತ್ರಗಳು ಸಂಪೂರ್ಣವಾಗಿ ನಕಲಿ ಮತ್ತು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾದ ಚಿತ್ರಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ತಿರುಚಿದ ವಿಡಿಯೋಗಳನ್ನು ತಯಾರಿಸುವುದು ಮತ್ತು ಅದನ್ನು ಹಂಚಿಕೊಳ್ಳುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿ ಹಾಗೂ ಒಬ್ಬರ ವೈಯಕ್ತಿಕ ಗೌಪ್ಯತೆಯ ಗಂಭೀರ ಉಲ್ಲಂಘನೆಯಾಗಿದೆ. ಈ ವಿಷಯವನ್ನು ತಾವು ಮತ್ತು ತಮ್ಮ ತಂಡ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಕೃತ್ಯ ಎಸಗಿದವರ ಮತ್ತು ಇದನ್ನು ಹರಡುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಕಾನೂನು ಹೋರಾಟ ಆರಂಭಿಸುತ್ತಿರುವುದಾಗಿ ಅವರು ಎಚ್ಚರಿಸಿದ್ದಾರೆ. ಅಲ್ಲದೆ ಸಾರ್ವಜನಿಕರು ಇಂತಹ ನಕಲಿ ವಿಷಯಗಳನ್ನು ಹಂಚಿಕೊಳ್ಳದಂತೆ ಅಥವಾ ಅದಕ್ಕೆ ಪ್ರೋತ್ಸಾಹ ನೀಡದಂತೆ ವಿನಂತಿಸಿಕೊಂಡಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಪ್ರಿಯಾ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ರುಕ್ಮಿಣಿ ವಸಂತ್, ಸದ್ಯ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ರಾಜಕುಮಾರಿ ಕನಕಾವತಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ 'ಡ್ರ್ಯಾಗನ್' ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂತಹ ಪ್ರಮುಖ ಹಂತದಲ್ಲಿ ನಟಿಯ ವಿರುದ್ಧ ನಡೆದಿರುವ ಈ ಡೀಪ್‌ಫೇಕ್ ಕೃತ್ಯವು ತಂತ್ರಜ್ಞಾನದ ದುರ್ಬಳಕೆ ಮತ್ತು ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಇಡೀ ಚಿತ್ರರಂಗದಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿದೆ.

