ಯೋಗೇಶ್ವರ್ ನಮ್ಮ ಕಟ್ಟಾಳಾಗಿರಲಿಲ್ಲ: ಆರ್ ಅಶೋಕ್ ಪ್ರತಿಕ್ರಿಯೆ
ಸಿ ಪಿ ಯೋಗೇಶ್ವರ್ ಬಿಜೆಪಿಯ ಕಟ್ಟಾಳು ಅಲ್ಲ; ಕಾಟಾಚಾರಕ್ಕೆ ನಮ್ಮೊಂದಿಗೆ ಇದ್ದರು ಎನಿಸುತ್ತದೆ ಎಂದು ಬಿಜೆಪಿ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಚನ್ನಪ್ಪಟ್ಟಣ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ಗಾಗಿ ಭಾರೀ ಪ್ರಯತ್ನ ನಡೆಸಿದ್ದ ಯೋಗೇಶ್ವರ್, ಕ್ಷೇತ್ರವನ್ನು ಬಿಜೆಪಿ ತನ್ನ ಎನ್ಡಿಎ ಮಿತ್ರಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಟಿಕೆಟ್ ವಂಚಿತರಾಗಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಸೇರಿದ್ದಾರೆ. ಆ ಮುನ್ನ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದ ತಮ್ಮ ವಿಧಾನ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.
ಯೋಗೇಶ್ವರ್ ಕಾಂಗ್ರೆಸ್ ಸೇರಿರುವ ಕುರಿತು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್ ಅಶೋಕ್, ಯೋಗೇಶ್ವರ್ ಮೊದಲಿಂದಲೂ ಎಲ್ಲ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದರು. ಕಾಟಾಚಾರಕ್ಕೆ ನಮ್ಮೊಂದಿಗೆ ಇದ್ದರು ಎನ್ನಿಸುತ್ತೆ. ಅವರು ಎಂದೂ ಬಿಜೆಪಿಯ ಕಟ್ಟಾಳಾಗಿರಲಿಲ್ಲ ಎಂದರು.
ಸಿ ಪಿ ಯೋಗೇಶ್ವರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ನಮ್ಮ ನಂಬಿಕೆಗೆ ಅಪಚಾರ ಮಾಡಿ ಅವರು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿ ಸಿಪಿ ಯೋಗೇಶ್ವರ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಸೇರಿದ್ದು, ನಮ್ಮ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಪಕ್ಷ ತೊರೆದು ಬಹಳಷ್ಟು ಜನ ಹೋಗಿದ್ದಾರೆ. ಲಕ್ಷಣ್ ಸವದಿ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮಂತ್ರಿ ಮಾಡಿದ್ದಾರಾ? ಜಗದೀಶ್ ಶೆಟ್ಟರ್ ಕೂಡ ಹೋಗಿದ್ದರು, ಅವರಿಗೆ ಯಾವ ಸ್ಥಾನ ಕೊಟ್ಟಿದ್ದರು? ಎಂದು ಪ್ರಶ್ನಿಸಿದರು.
ಸಿ ಪಿ ಯೋಗೇಶ್ವರ್ ಸೈಕಲ್ ಗುರುತು, ಬಿಎಸ್ಪಿ ಎಲ್ಲ ಮುಗಿಸಿಕೊಂಡು ನಮ್ಮ ಪಕ್ಷಕ್ಕೆ ಬಂದವರು. ಅವರು ಸೈದ್ಧಾಂತಿಕವಾಗಿ ನಮ್ಮ ಪಕ್ಷದಲ್ಲಿ ಇದ್ದವರಲ್ಲ. ಚನ್ನಪಟ್ಟಣದಲ್ಲಿ ಬಿಜೆಪಿ ವೋಟ್ ಅಲ್ಲೇ ಇರುತ್ತೆ. ನಾನು, ಪ್ರಹ್ಲಾದ್ ಜೋಶಿ ಅವರು ಜೆಡಿಎಸ್ ಟಿಕೆಟ್ ಅಂತ ಸಿ ಪಿ ಯೋಗೇಶ್ವರ್ ಅವರಿಗೆ ಹೇಳಿದ್ವಿ. ಹೆಚ್ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿ ಎಂದು ಹೇಳಿದ್ದರು. ಆದರೆ, ಯೋಗೇಶ್ವರ್ ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದರು.
ಅವರು ಈಗ ಕಾಂಗ್ರೆಸ್ಗೆ ಹೋಗಿದ್ದಾರೆ, ಇದು ಪಕ್ಷಕ್ಕೆ ದ್ರೋಹ ಬಗೆದಂತೆ. ರಾಜ್ಯದ ಎಲ್ಲ ಬಿಜೆಪಿ ನಾಯಕರು ಅವರ ಪರವಾಗಿ ಇದ್ದೆವು. ಟಿಕೆಟ್ ಕೊಡಿಸುವ ಸಲುವಾಗಿ ಪ್ರಯತ್ನ ಮಾಡಿದ್ವಿ. ಬಿಜೆಪಿ ಚಿಹ್ನೆ, ಜೆಡಿಎಸ್ ಚಿಹ್ನೆ ಅಂತಲ್ಲ. ಎನ್ಡಿಎ ಗೆಲ್ಲುವುದು ಮುಖ್ಯ. ಎನ್ಡಿಎನಲ್ಲಿ ಅವರಿಗೆ ಸೀನಿಯಾರಿಟಿ ಇತ್ತು. ಈಗ ಹೋಗಿ ಲಾಸ್ಟ್ನಲ್ಲಿ ಕೂತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಎನ್ಡಿಎಗೆ ಮುಖಭಂಗ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇದೆ. ಜೆಡಿಎಸ್ನವರು ಯಾರಿಗೆ ಟಿಕೆಟ್ ಕೊಟ್ಟರು ನಾವು ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದೂ ಅವರು ಹೇಳಿದರು.