ವಿಧಾನ ಮಂಡಲ ಅಧೀವೇಶನ: ರೈತ ಸಮಸ್ಯೆಗಳನ್ನೇ ಅಸ್ತ್ರವಾಗಿಸಿಕೊಂಡ ವಿಪಕ್ಷಗಳು; ಇಂದು ಸುವರ್ಣಸೌಧ ಮುತ್ತಿಗೆ

ಒಂದೆಡೆ ವಿಪಕ್ಷಗಳ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಲಿದ್ದರೆ, ಇನ್ನೊಂದೆಡೆ ಆಡಳಿತ ಪಕ್ಷದ ಶಾಸಕರೇ ವಿವಾದಾತ್ಮಕ ವಿಷಯವೊಂದನ್ನು ಪ್ರಸ್ತಾಪಿಸಲು ಮುಂದಾಗಿದ್ದಾರೆ.

Update: 2025-12-09 03:50 GMT

ಬೆಳಗಾವಿಯ ಸುವರ್ಣಸೌಧ

Click the Play button to listen to article

ಕುಂದಾನಗರಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನವೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ ವಿರೋಧ ಪಕ್ಷಗಳು, ಇಂದು (ಮಂಗಳವಾರ) ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ಸಜ್ಜಾಗಿವೆ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದಿರುವುದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಇಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

ಉತ್ತರ ಕರ್ನಾಟಕ ಭಾಗದ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಹಾಗೂ ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ರಾಜ್ಯ ಸರ್ಕಾರವು ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷಗಳು, ಈ ರೈತ ವಿರೋಧಿ ನೀತಿಯನ್ನು ಖಂಡಿಸಿ ಬೆಳಿಗ್ಗೆ 10 ಗಂಟೆಗೆ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿವೆ.

ಸರ್ಕಾರಕ್ಕೆ ಚಳಿ ಬಿಡಿಸಲು ತಂತ್ರ

ಮಾಲಿನಿ ಸಿಟಿ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನೆಯ ನಂತರ, ಬಿಜೆಪಿ ನಾಯಕರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಈ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಅಧಿವೇಶನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದು ವಿಪಕ್ಷಗಳ ತಂತ್ರವಾಗಿದೆ.

ಸದನದಲ್ಲಿ ಸದ್ದು ಮಾಡಲಿರುವ 'ಟಿಪ್ಪು ಜಯಂತಿ' ಪ್ರಸ್ತಾಪ

ಒಂದೆಡೆ ವಿಪಕ್ಷಗಳ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಲಿದ್ದರೆ, ಇನ್ನೊಂದೆಡೆ ಆಡಳಿತ ಪಕ್ಷದ ಶಾಸಕರೇ ವಿವಾದಾತ್ಮಕ ವಿಷಯವೊಂದನ್ನು ಪ್ರಸ್ತಾಪಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಹಿಂದೆ ಆಚರಣೆಯಲ್ಲಿದ್ದು ನಂತರ ಸ್ಥಗಿತಗೊಂಡಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಮತ್ತೆ ಜಾರಿಗೆ ತರುವಂತೆ ಕಾಂಗ್ರೆಸ್ ಶಾಸಕರಿಂದಲೇ ಒತ್ತಡ ಕೇಳಿಬಂದಿದೆ.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದಾರೆ. ಗಮನ ಸೆಳೆಯುವ ಸೂಚನೆಯ ಅಡಿಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮತ್ತೆ ಅವಕಾಶ ನೀಡುವಂತೆ ಅವರು ಮುಖ್ಯಮಂತ್ರಿಗಳ ಗಮನ ಸೆಳೆಯಲಿದ್ದಾರೆ. ಈ ವಿಷಯವು ಈಗಾಗಲೇ ನಾಳಿನ ವಿಧಾನಸಭೆ ಕಲಾಪದ ಅಜೆಂಡಾದಲ್ಲಿ ಸೇರ್ಪಡೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಒಟ್ಟಾರೆಯಾಗಿ, ರೈತರ ಪ್ರತಿಭಟನೆ, ಸುವರ್ಣಸೌಧ ಮುತ್ತಿಗೆ ಹಾಗೂ ಟಿಪ್ಪು ಜಯಂತಿ ಮರುಜಾರಿಯ ಪ್ರಸ್ತಾಪಗಳು ಬೆಳಗಾವಿ ಅಧಿವೇಶನದ ಕಾವು ಹೆಚ್ಚಿಸಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

Tags:    

Similar News