ಬೀದಿನಾಯಿಗಳ ಆಶ್ರಯ ತಾಣ ವಿಸ್ತರಣೆಗೆ ಸ್ಥಳೀಯರ ತೀವ್ರ ವಿರೋಧ; ಪ್ರತಿಭಟನೆಯ ಎಚ್ಚರಿಕೆ

ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಬೀದಿನಾಯಿಗಳ ರಕ್ಷಣೆ ಮತ್ತು ಆರೈಕೆಗಾಗಿ ಈ ಕೇಂದ್ರವನ್ನು ಬಳಸಿಕೊಳ್ಳಲು ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

Update: 2025-12-07 05:18 GMT

ಪ್ರತಿಭಟನಾಕಾರರು ಭಿತ್ತಿಪತ್ರ ಪ್ರದರ್ಶಿಸಿದರು.

Click the Play button to listen to article

ಕೆಂಗೇರಿ ಉಪನಗರದ ಸುಭಾಷ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಕೃಪಾ ಲಿವಿಂಗ್ ಅನಿಮಲ್ಸ್’ ಸಂಸ್ಥೆಯನ್ನು ಬೀದಿನಾಯಿಗಳ ತಾತ್ಕಾಲಿಕ ಆಶ್ರಯ ತಾಣವನ್ನಾಗಿ ವಿಸ್ತರಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಸ್ತಾವಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ವಳಗೆರೆಹಳ್ಳಿ ನಿವಾಸಿಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಬೀದಿನಾಯಿಗಳ ರಕ್ಷಣೆ ಮತ್ತು ಆರೈಕೆಗಾಗಿ ಈ ಕೇಂದ್ರವನ್ನು ಬಳಸಿಕೊಳ್ಳಲು ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಈಗಾಗಲೇ ಈ ಸಂಸ್ಥೆಯು ನಿಯಮಗಳನ್ನು ಉಲ್ಲಂಘಿಸಿ ರೋಗಪೀಡಿತ ಪ್ರಾಣಿಗಳನ್ನು ಕರೆತರುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ. ನಿರ್ವಹಣೆಯ ಕೊರತೆಯಿಂದಾಗಿ ಮತ್ತು ಸ್ವಚ್ಛತೆ ಕಾಪಾಡದ ಕಾರಣ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೂ ದುರ್ನಾತ ಬೀರುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್. ಕದರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಕಡಿಮೆ ಸ್ಥಳದಲ್ಲಿ ಸಾಮರ್ಥ್ಯಕ್ಕೂ ಮೀರಿ ನಾಯಿಗಳನ್ನು ಕೂಡಿ ಹಾಕುತ್ತಿರುವುದರಿಂದ ಅವುಗಳು ಪರಸ್ಪರ ಕಚ್ಚಾಡಿಕೊಳ್ಳುತ್ತಿವೆ. ಅತೀ ಮುಖ್ಯವಾಗಿ, ಮೃತಪಟ್ಟ ಪ್ರಾಣಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು, ಕೇಂದ್ರದ ಸಮೀಪವಿರುವ ಕೆರೆಯ ಅಂಚಿನಲ್ಲಿಯೇ ಹೂಳಲಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದ್ದು, ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣವೇ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಬಡಾವಣೆಯ ಸಾವಿರಾರು ಕುಟುಂಬಗಳು ಒಗ್ಗೂಡಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಒಕ್ಕೂಟದ ಸದಸ್ಯರು ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.

Tags:    

Similar News