Reservation Part-4| ನ್ಯಾಯಲಯದ ಅಂಗಳದಲ್ಲಿ ʼಮೀಸಲಾತಿʼ; ಪರಿಶಿಷ್ಟರ ದುಮ್ಮಾನವೇನು?

ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ ಮೀಸಲಾತಿ ಹೆಚ್ಚಳವನ್ನು ವಿಶೇಷ ಪ್ರಕರಣವೆಂದು ಎಂದು ಪರಿಗಣಿಸಿ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ದಲಿತ ಮುಖಂಡರು ಅಗ್ರಹಿಸಿದ್ದಾರೆ.

Update: 2025-12-09 03:30 GMT
Click the Play button to listen to article

ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ಜಾರಿಯಲ್ಲಿ ಉದ್ಭವಿಸಿರುವ ಗೊಂದಲಗಳಿಂದ ದಲಿತ ಸಮುದಾಯಗಳು ಅತಂತ್ರಗೊಂಡಿವೆ. ಆಳುವ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಹಾಗೂ ಕಾಳಜಿ ರಹಿತ ಆಡಳಿತದ ಪರಿಣಾಮ ದಲಿತರು ಮೀಸಲಾತಿ ಸಮಸ್ಯೆಯ ಸುಳಿಗೆ ಸಿಲುಕಿ ಒದ್ದಾಡುತಿದ್ದಾರೆ.

ಮೀಸಲಾತಿ ವಿಚಾರದಲ್ಲಿ ಸರ್ಕಾರಗಳು ವೋಟ್‌ಬ್ಯಾಂಕ್‌ ರಾಜಕಾರಣ ನಡೆಸಿದರೂ ಆ ಸಮುದಾಯಗಳಿಗೆ ಮಾತ್ರ ಮೀಸಲಾತಿಯ ಲಾಭ ದೊರಕಿಸಿಕೊಟ್ಟಿಲ್ಲ. ದೀರ್ಘ ಅವಧಿಯವರೆಗೆ ರಾಜಕೀಯ ಲಾಭ ಪಡೆಯುವ ಸಲುವಾಗಿ ಗೊಂದಲಗಳನ್ನು ಸೃಷ್ಟಿಸಿ ದಲಿತರನ್ನು ಅಡಗತ್ತರಿಯಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಸದ್ಯ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿಗೆ ಜಾರಿಗೆ ಹೈಕೋರ್ಟ್‌ ತಡೆ ನೀಡಿದ್ದು, ಉದ್ಯೋಗ ನೇಮಕಾತಿಗಳು ಸ್ತಬ್ಧಗೊಂಡಿವೆ. ಇದರಿಂದ ಪರಿಶಿಷ್ಟ ಜಾತಿಯ ಉದ್ಯೋಗಾಕಾಂಕ್ಷಿಗಳು ಚಾತಕ ಪಕ್ಷಿಯಂತೆ ಮೀಸಲಾತಿ ಎದುರುನೋಡುತ್ತಿದ್ದಾರೆ.    

ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ

"ರಾಜ್ಯ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನಾಗಮೋಹನ್ ದಾಸ್ ವರದಿ ಅಂಗೀಕರಿಸಿದೆ. ಆದರೆ, ಈಗ ಅದೇ ವರದಿ ಸೇರಿದಂತೆ ಮೀಸಲಾತಿಗೆ ಸಂಬಂಧಿಸಿದ ಮೂರು ವಿಷಯಗಳು ನ್ಯಾಯಾಂಗದ ಕಟಕಟೆಯಲ್ಲಿವೆ. ಒಳ ಮೀಸಲಾತಿ ವರ್ಗೀಕರಣ, ಪರಿಶಿಷ್ಟರಲ್ಲವರನ್ನು ಮೀಸಲಾತಿಗೆ ಸೇರಿಸಿರುವ ಹಾಗೂ ಮೀಸಲಾತಿ ಹೆಚ್ಚಳದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಪರಿಶಿಷ್ಟರು ಬವಣೆ ಅನುಭವಿಸುವಂತಾಗಿದೆ ಎಂದು ದಲಿತ ಮುಖಂಡ ಹಾಗೂ ಹೋರಾಟಗಾರ ಮಾವಳ್ಳಿ ಶಂಕರ್‌ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ರಾಜ್ಯ ಸರ್ಕಾರ ಸೂಕ್ತವಾದ ಸಾಂವಿಧಾನಿಕ ಕ್ರಮ ಕೈಗೊಂಡು ಸ್ಪಷ್ಟ ನೀತಿ ರೂಪಿಸಬೇಕು. ಮೀಸಲಾತಿ ಕುರಿತಂತೆ ಎದ್ದಿರುವ ಅಪವಾದಗಳಿಗೆ ಇತಿಶ್ರೀ ಹಾಡಬೇಕು. ಅನಗತ್ಯ ಗೊಂದಲ ಮೂಡಿಸುವ ಮೂಲಕ ಸರ್ಕಾರ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

1994 ರಲ್ಲಿ ಅಂದಿನ ಸಿಎಂ ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇ 73ಕ್ಕೆ ಹೆಚ್ಚಿಸಿತ್ತು. ಅದು ಸುಪ್ರೀಂಕೋರ್ಟ್‌ ಅಂಗಳ ತಲುಪಿತ್ತು. ಆದರೆ, ಈವರೆಗೆ ಅದು ಏನಾಯಿತು ಎಂಬುದು ಗೊತ್ತಾಗಿಲ್ಲ ಇಲ್ಲ. ಸರ್ಕಾರದ ಆತುರದ ನೀತಿಗಳಿಂದ ಸಮಾಜದಲ್ಲಿ ದ್ವೇಷ ಹೆಚ್ಚುತ್ತಿದೆ. ಜಾತಿ ಜಾತಿಗಳು ಒಡೆದಾಡಿಕೊಳ್ಳುವ ಮಟ್ಟಿಗೆ ಹೋಗಿವೆ. ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೆ ತಂದೇ ತರುವುದಾಗಿ ಶಪಥ ಮಾಡಿತ್ತು. ಚುನಾವಣಾ ಪ್ರಣಾಳಿಕೆಯಲ್ಲೂ ಅದನ್ನು ಪುನರುಚ್ಚರಿಸಿತ್ತು. ಕೊನೆಗೆ ಪ್ರಣಾಳಿಕೆ ಸಿದ್ಧಪಡಿಸಿದವರೇ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದರು ಎಂದು ಹೇಳಿದರು.

ಮೀಸಲಾತಿ ಕುರಿತು ದ್ವಂದ್ವ ನಿಲುವುಗಳು ದೀರ್ಘಕಾಲದಲ್ಲಿ ರಾಜಕೀಯವಾಗಿ ಮುಳುವಾಗಬಹುದು. ಮೀಸಲಾತಿ ಗೊಂದಲದಿಂದ ಬ್ಯಾಕ್‌ಲಾಗ್‌ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಬ್ಯಾಕ್ಲಾಗ್ ಹುದ್ದೆ ಭರ್ತಿ ಮಾಡುವ ಜವಾಬ್ದಾರಿ ನಿರ್ವಹಿಸುವ ಸಮಾಜ ಕಲ್ಯಾಣ ಇಲಾಖೆಯ ಮೀಸಲಾತಿ ಕೋಶ ನಿರ್ಲಿಪ್ತವಾಗಿದೆ ಎಂದು ಮಾವಳ್ಳಿ ಶಂಕರ್ ದೂರಿದರು.

ಸರ್ಕಾರದಿಂದಲೇ ಕುತಂತ್ರ

ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಲಕ ಬಿ.ಆರ್. ಭಾಸ್ಕರಪ್ರಸಾದ್ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಕುತಂತ್ರ ನಡೆಸುತ್ತಿದೆ. ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ಪರಿಗಣಿಸಿಲ್ಲ. ವರದಿಯಲ್ಲಿ ಕೆಲ ನೂನ್ಯತೆಗಳಿದ್ದರೂ ಅದರ ಜಾರಿಯ ಬಳಿಕ ಸರಿ ಮಾಡಬಹುದಾಗಿತ್ತು. ಆದರೆ, ಅವೈಜ್ಞಾನಿಕವಾಗಿ ಶಿಫಾರಸುಗಳನ್ನು ಮಾರ್ಪಡಿಸಿದ್ದು ಸರಿಯಲ್ಲ ಎಂದು ಟೀಕಿಸಿದರು.

ಮೀಸಲಾತಿ ಹೆಚ್ಚಳವನ್ನು ಸಾಂವಿಧಾನಿಕ ತಿದ್ದುಪಡಿ ಮೂಲಕ 9ನೇ ಪರಿಚ್ಛೇಧದಲ್ಲಿ ಸೇರಿಸಲು ಈ ಹಿಂದಿನ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂಬ ಮಾಹಿತಿ ಬಂದಿತ್ತು. ಆದರೆ,ಕೇಂದ್ರ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಅವರು ಅಂತಹ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದಿಲ್ಲ ಎಂದು ಹೇಳಿದ್ದರು. ಹೀಗಿರುವಾಗ ಸರ್ಕಾರ ಒಳ ಮೀಸಲಾತಿ ಆಯೋಗ ರಚನೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.

ಈಗ ನ್ಯಾ.ನಾಗಮೋಹನ್ ದಾಸ್ ವರದಿ ಆಧರಿಸಿದ ಒಳ ಮೀಸಲಾತಿ ಜಾರಿಗೆ ನ್ಯಾಯಾಲಯ ಅಂಕುಶ ಹಾಕಿದೆ. 153 ಕೋಟಿ ರೂ. ವೆಚ್ಚದಲ್ಲಿ ತಯಾರಿಸಿದ ವರದಿ ಮೂಲೆಗುಂಪಾಗಿದೆ ಎಂದರು.

ಝೆನ್ ಜಿ ಮಾದರಿ ಹೋರಾಟ ಸಾಧ್ಯತೆ

ರಾಜ್ಯ ಸರ್ಕಾರವು ಮೀಸಲಾತಿ ಗೊಂದಲ ಸೃಷ್ಟಿಸಿರುವ ಕಾರಣ ಕಾಲಕಾಲಕ್ಕೆ ಉದ್ಯೋಗ ನೇಮಕಾತಿಗಳು ನಡೆಯದಂತಾಗಿವೆ. ಹಲವರು ವಯೋಮಿತಿಯ ಅಂಚಿನಲ್ಲಿದ್ದಾರೆ. ಯುವಜನರ ತಾಳ್ಮೆಯ ಕಟ್ಟೆಯೊಡೆದರೆ ನೇಪಾಳ ಮಾದರಿಯ ಝೆನ್ಜಿ ಹೋರಾಟ ನಡೆಯುವ ಸಾಧ್ಯತೆಗಳಿವೆ ಎಂದು ದಲಿತ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಎಚ್ಚರಿಸಿದರು.

ಧಾರವಾಡ ಹಾಗೂ ವಿಜಯಪುರದಲ್ಲಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದ್ದಾರೆ. ಸರ್ಕಾರದ ವಿಳಂಬ ನೀತಿ ಇದೇ ರೀತಿ ಮುಂದುವರಿದರೆ ರಾಜ್ಯವ್ಯಾಪಿ ಪಸರಿಸಿ, ಝೆನ್ ಜಿ ಮಾದರಿಯ ಹೋರಾಟಕ್ಕೆ ಕಾರಣವಾಗಬಹುದು. ಹಾಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.

ನಾಳೆಯಿಂದ ಜಾಥಾ

ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರದಿಂದ ದಾವಣಗೆರೆಯ ಹರಿಹರದಿಂದ ಜಾಥಾ ನಡೆಯಲಿದೆ. ಪ್ರತಿ ತಾಲೂಕುಗಳಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಮೂಡಿಸಿ, ಡಿ.11 ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿ.ಆರ್.ಭಾಸ್ಕರ ಪ್ರಸಾದ್ ಹೇಳಿದರು.

ಸರ್ಕಾರದಿಂದ ಪಾಲಾಯನ ವಾದ

ರಾಜ್ಯ ಸರ್ಕಾರ ಒಳ ಮೀಸಲಾತಿ ವರದಿ ಅನುಷ್ಠಾನ ಸಂದರ್ಭದಲ್ಲೇ ಎಡವಿದೆ. ಸರ್ಕಾರಕ್ಕೆ ಮೀಸಲಾತಿ ಕುರಿತು ಸ್ಪಷ್ಟತೆ ಜತೆಗೆ ಅಸ್ಪಷ್ಟತೆಯೂ ಇದೆ. ವರದಿ ಜಾರಿ ವೇಳೆ ಮಾಡಿದ ವರ್ಗೀಕರಣ ಸಂಪೂರ್ಣ ಅವೈಜ್ಞಾನಿಕ ಹಾಗೂ ಅಪ್ರಾಯೋಗಿಕವಾಗಿತ್ತು. ಸ್ಪೃಶ್ಯ ಜಾತಿಗಳೊಂದಿಗೆ ಅಸ್ಪೃಶ್ಯರು ಪೈಫೋಟಿ ನೀಡಲು ಸಾಧ್ಯವಿಲ್ಲ, ಆಗಿದ್ದರೂ ಸರ್ಕಾರ ಸ್ಪೃಶ್ಯ ಜಾತಿಗಳೊಂದಿಗೆ ಅಲೆಮಾರಿಗಳನ್ನು ಸೇರಿಸುವ ಮೂಲಕ ದೊಡ್ಡ ತಪ್ಪು ಮಾಡಿತು. ಇದು ಜನರನ್ನು ಅನುಮಾನಗಳಿಗೆ ದೂಡಿತು ಎಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಶಂಕರ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನ್ಯಾ. ನಾಗಮೋಹನ್ ದಾಸ್ ಅವರೇ ಮೀಸಲಾತಿ ಹೆಚ್ಚಿಸಿದ್ದರು. ಅದನ್ನು ಸಂವಿಧಾನದ 9 ನೇ ಶೆಡ್ಯೂಲ್ಗೆ ಸೇರಿಸಲು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ವೈಜ್ಞಾನಿಕ ವರದಿ ಕಳುಹಿಸಿರಲಿಲ್ಲ. ತಳಸಮುದಾಯಗಳ ಬಗ್ಗೆ ಸರ್ಕಾರಗಳಿಗೆ ಹೊಕ್ಕಳ ಪ್ರೀತಿ ಇದ್ದರೆ ಮಾತ್ರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದವು. ಆದರೆ, ಆ ರೀತಿಯ ಪ್ರೀತಿ ಸರ್ಕಾರಗಳಿಗಿಲ್ಲ. ಮೀಸಲಾತಿಯು ಚುನಾವಣಾ ರೀತಿಯ ಘೋಷಣೆಗಳಂತಾಗಿವೆ ಎಂದು ದೂರಿದರು.

ಮೀಸಲಾತಿಯು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವಲ್ಲ. ಸಾಮಾಜಿಕ ಹಾಗೂ ಆರ್ಥಿಕ ಪ್ರಾತಿನಿಧ್ಯ ಒದಗಿಸುವ ಕಾರ್ಯಕ್ರಮ. ರಾಜ್ಯಗಳಿಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿಕೊಂಡು ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಆದರೆ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಪಲಾಯನವಾದ ಮಾಡುತ್ತಿದೆ. ರಾಜ್ಯದಲ್ಲಿ 1.5 ಕೋಟಿ ಜನಸಂಖ್ಯೆ ಇರುವ ಪ್ರಬಲ ಸಮುದಾಯವು ಮೀಸಲಾತಿ ವಿಚಾರದಲ್ಲಿಅಸಂಘಟಿತ ಸಮುದಾಯವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ ವಿಶೇಷ ಆಯೋಗ ಸ್ಥಾಪನೆ ಮಾಡಬೇಕು. ಮೀಸಲಾತಿ ಹೆಚ್ಚಳವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.

Tags:    

Similar News