ನಾಯಕತ್ವ ಬದಲಾವಣೆ ಕೂಗು: "ಬಾಯಿ ಮುಚ್ಚಿಕೊಂಡಿರಿ" ಎಂದು ಸಿಡಿದ ಬೇಳೂರು ಗೋಪಾಲಕೃಷ್ಣ
ಪಕ್ಷದೊಳಗೆ ಹಲವು ಶಾಸಕರು ಹಾಗೂ ಮುಖಂಡರು ಪದೇ ಪದೇ ನಾಯಕತ್ವ ಬದಲಾವಣೆಯ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದು, ಪಕ್ಷಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.
ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂಎಲ್‌ಎ ಬೇಳೂರು ಗೋಪಾಲಕೃಷ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಪರಸ್ಪರರ ನಿವಾಸಗಳಲ್ಲಿ ಭೋಜನಕೂಟ ನಡೆಸಿ "ನಾವಿಬ್ಬರೂ ಒಗ್ಗಟ್ಟಾಗಿದ್ದೇವೆ" ಎಂಬ ಸಂದೇಶ ಸಾರಿದ್ದರು. ಆದರೆ, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್‌ನೊಳಗಿನ ನಾಯಕತ್ವ ಬದಲಾವಣೆಯ ಚರ್ಚೆ ತಾರಕಕ್ಕೇರಿದ್ದು, ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಈ ನಡುವೆ, ಹಿರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸ್ವಪಕ್ಷೀಯ ನಾಯಕರ ವಿರುದ್ಧವೇ ಸಿಡಿದೆದ್ದಿದ್ದು, "ಅಧಿವೇಶನ ಮುಗಿಯುವವರೆಗೂ ಬಾಯಿ ಮುಚ್ಚಿಕೊಂಡಿರಿ" ಎಂದು ಖಾರವಾಗಿ ಎಚ್ಚರಿಸಿದ್ದಾರೆ.
ಅಧಿವೇಶನದ ಮೊದಲ ದಿನವೇ (ಡಿ.8) ಸಿಎಂ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು "ಸಿದ್ದರಾಮಯ್ಯನವರೇ ಐದು ವರ್ಷ ಪೂರ್ಣಾವಧಿ ಸಿಎಂ" ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣ, ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಅಧಿವೇಶನ ಮುಗಿದ ಮೇಲೆ ನಿಮ್ಮ ಚಟ ತೀರಿಸಿಕೊಳ್ಳಿ. ಪಕ್ಷಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳಬೇಡಿ. ಇಂತಹ ಹೇಳಿಕೆ ನೀಡುವವರಿಗೆ ಹೈಕಮಾಂಡ್ ಕೂಡಲೇ ನೋಟಿಸ್ ನೀಡಬೇಕು" ಎಂದು ಆಗ್ರಹಿಸಿದರು.
ನಾವು ಕೇಳುತ್ತೇವೆ ಅವಕಾಶ
ಪಕ್ಷದೊಳಗಿನ ಗೊಂದಲಗಳ ಬಗ್ಗೆ ಮಾತನಾಡಿದ ಅವರು, "ನಾಯಕತ್ವದ ಗೊಂದಲ, ಸಚಿವ ಸಂಪುಟ ಪುನಾರಚನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಶಾಸಕಾಂಗ ಪಕ್ಷದ (CLP) ಸಭೆ ಇದೆ. ಅಲ್ಲಿ ಎಲ್ಲರೂ ಮುಕ್ತವಾಗಿ ಮಾತನಾಡಬಹುದು. ಇದೇ ರೀತಿ ಮುಂದುವರಿದರೆ, ನಾವೂ ಕೂಡ ಸಚಿವರನ್ನು ಕೈಬಿಟ್ಟು ನಮಗೆ ಅವಕಾಶ ಕೊಡಿ ಎಂದು ಕೇಳಬೇಕಾಗುತ್ತದೆ. ನಾಯಕತ್ವ ಬದಲಾವಣೆ ಹೇಳಿಕೆಗಳ ಬಗ್ಗೆ ನಾನು ಸಿಎಲ್‌ಪಿ ಸಭೆಯಲ್ಲೇ ಉತ್ತರಿಸುತ್ತೇನೆ" ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಬಿಜೆಪಿ
ಕಾಂಗ್ರೆಸ್‌ನಲ್ಲಿನ ಗೊಂದಲದ ಬಗ್ಗೆ ಟೀಕಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ ಬೇಳೂರು, "ನಮ್ಮದು ರಾಷ್ಟ್ರೀಯ ಪಕ್ಷ. ಸಮಸ್ಯೆಗಳಿದ್ದರೆ ಹೈಕಮಾಂಡ್ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ, ಬಿಜೆಪಿ ತಮ್ಮ ಪಕ್ಷದೊಳಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ" ಎಂದು ಟೀಕಿಸಿದರು.
ಸಿಎಂ, ಡಿಸಿಎಂ ಬಣಗಳ ಹೇಳಿಕೆಗಳ ಸಮರ
ಚುನಾವಣೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಈಡೇರಿಸುತ್ತಿದೆ. ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಡಾ. ಯತೀಂದ್ರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ, ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತ ಹಾಗೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್, "ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಖಚಿತ. ಜನವರಿ 6 ಅಥವಾ 9ರವರೆಗೆ ಕಾದುನೋಡಿ, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ" ಎಂದು 'ದ ಫೆಡರಲ್ ಕರ್ನಾಟಕ'ಕ್ಕೆ ಹೇಳುವ ಮೂಲಕ ಚರ್ಚೆಗೆ ಮತ್ತಷ್ಟು ಇಂಬು ನೀಡಿದ್ದರು.